

ಕೈಲಾಂಚ: ಹೋಬಳಿಯ ವಿಭೂತಿಕೆರೆ ಬನ್ನಿಕುಪ್ಪೆ ಗ್ರಾಮದಲ್ಲಿ ಎರಡು ಕಾಡಾನೆಗಳು ಶುಕ್ರವಾರ ರಾತ್ರಿ ದಾಳಿ ನಡೆಸಿ ರಾಗಿ ಮೆದೆಗಳು, ತೆಂಗು, ಮಾವು, ನೀರಾವರಿ ಪರಿಕರ ಭತ್ತದ ಗದ್ದೆ ನಾಶಪಡಿಸಿವೆ.
ಚಿಕ್ಕಮಣ್ಣುಗುಡ್ಡೆ ಅರಣ್ಯದಿಂದ ಬಂದಿರುವ ಎರಡು ಆನೆಗಳು ಅಚ್ಚಲು ಅರಣ್ಯ ಸೇರಲು ಹೋಗಿ ಅಲ್ಲಿಗೆ ಹೋಗದೆ ಅಂಜನಾಪುರದಿಂದ ವಾಪಸ್ ಬನ್ನಿಕುಪ್ಪೆ ಕಡೆಗೆ ವಿಭೂತಿಕೆರೆ ಮುಖಾಂತರ ಹೋಗಿವೆ. ಬಂದು ಹೋಗುವ ಸಂದರ್ಭದಲ್ಲಿ ವಿಭೂತಿಕೆರೆ ಗ್ರಾಮದಲ್ಲಿ ಫಸಲು ನಾಶಪಡಿಸಿವೆ.
ತೆಂಗಿನಮರಗಳನ್ನು ಬುಡ ಸಮೇತಕಿತ್ತು ನಾಶಪಡಿಸಿವೆ. ಜತೆಗೆಇನ್ನಿತರ ಹಲವು ರೈತರ ಒಕ್ಕಣೆಕಣದಲ್ಲಿನ ರಾಗಿ ಮೆದೆಗಳನ್ನು ನಾಶಪಡಿಸಿ ಹೋಗಿವೆ. ಆನೆಗಳ ಕಾಟ ವಿಪರೀತವಾಗಿದ್ದು ಪದೇಪದೆ ಫಸಲು, ಮರಮುಟ್ಟುಗಳನ್ನು ನಾಶಪಡಿಸಿ ರೈತರಿಗೆ ಆರ್ಥಿಕ ನಷ್ಟ ಉಂಟುಮಾಡುತ್ತಿವೆ.
ಜತೆಗೆ ಆಗಿಂದಾಗ್ಗೆ ಆನೆಗಳ ಹಿಂಡು ಜಮೀನಿನ ಬಳಿ ಕಾಣಿಸಿಕೊಳ್ಳುವುದರಿಂದ ಬೆಳೆಗಳಿಗೆ ರಾತ್ರಿ ವೇಳೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಕೂಡಲೇ ಆನೆಗಳನ್ನು ಅರಣ್ಯ ಇಲಾಖೆ ಅವುಗಳ ಸ್ವಸ್ಥಾನ ಸೇರಿಸಲು ಮುಂದಾಗಬೇಕು ಎಂದು ಗ್ರಾಮದ ಮಹದೇವಯ್ಯ ಆಗ್ರಹಿಸಿದ್ದಾರೆ.