

ಪುತ್ತೂರು ಗ್ರಾಮಾಂತರ: ಕುಡಿತದ ನಶೆಯಲ್ಲಿ ನೆರೆಯ ಮನೆಯಲ್ಲಿ ದಾಂಧಲೆ ಎಬ್ಬಿಸಿದ ಯುವಕನನ್ನು ನಾಯಿ ಕಟ್ಟಿಹಾಕುವ ಸಂಕೋಲೆಯಿಂದ ಬಿಗಿದು ಮನೆಗೆ ಎಳೆದುಕೊಂಡು ಹೋಗುತ್ತಿದ್ದ ವೇಳೆ ಕುತ್ತಿಗೆಗೆ ಬಿಗಿದು ಸಾವು ಸಂಭವಿಸಿದ ಘಟನೆ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ಸಂಪ್ಯ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಬೆಟ್ಟಂಪಾಡಿ ಗ್ರಾಮದ ಬರೆ ಸಮೀಪದ ಕಾನಾವುಮೂಲೆ ನಿವಾಸಿ ದಿ.ಕೊರಗಪ್ಪ ಶೆಟ್ಟಿ ಎಂಬುವರ ಪುತ್ರ ಚೇತನ್ ಶೆಟ್ಟಿ(35) ಮೃತ ಯುವಕ. ಚೇತನ್ ಅವಿವಾಹಿತನಾಗಿದ್ದು, ತಾಯಿ ಉಮಾವತಿ ಜತೆ ಕಾನಾವುಮೂಲೆಯಲ್ಲಿ ವಾಸ್ತವ್ಯವಿದ್ದ. ವಿಪರೀತ ಕುಡಿತದ ಚಟ ಹೊಂದಿದ್ದ ಚೇತನ್ ಶೆಟ್ಟಿ ಮದ್ಯ ಸೇವಿಸಿ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ಎನ್ನಲಾಗಿದೆ. ಗುರುವಾರ ರಾತ್ರಿ ಮದ್ಯ ಸೇವಿಸಿ ಮನೆಗೆ ಬಂದಿದ್ದ ಚೇತನ್ ಶೆಟ್ಟಿ, ತಡರಾತ್ರಿ 2 ಗಂಟೆಗೆ ತಾಯಿ ಜತೆ ಜಗಳವಾಡಿದ್ದ. ಬಳಿಕ ನೆರೆಯ ನಿವಾಸಿ ಯೂಸುಫ್ ಎಂಬುವರ ಮನೆಗೆ ಹೋಗಿ ಬಾಗಿಲು ಬಡಿಯುತ್ತ, ಕಿಟಕಿ ಬಾಗಿಲುಗಳಿಗೆ ಹೊಡೆಯುತ್ತ ರಾದ್ಧಾಂತ ಎಬ್ಬಿಸಿದ್ದ. ಇದನ್ನು ಯೂಸುಫ್ ಉಮಾವತಿಗೆ ಕರೆ ಮಾಡಿ ತಿಳಿಸಿದ್ದರು.
ತಾಯಿ ಉಮಾವತಿ ಚೇತನ್‌ನನ್ನು ಮನೆಗೆ ಎಳೆದುಕೊಂಡು ಬರಲು ನಾಯಿ ಕಟ್ಟಿಹಾಕುವ ಸಂಕೋಲೆ ಹಿಡಿದುಕೊಂಡು ಯೂಸುಫ್ ಮನೆಗೆ ಹೋಗಿದ್ದರು. ಯೂಸುಫ್ ಅವರ ಸಹಕಾರದೊಂದಿಗೆ ಸಂಕೋಲೆಯಲ್ಲಿ ಕಟ್ಟಿಹಾಕಿ ಎಳೆದುಕೊಂಡು ಮನೆಗೆ ಬಂದಿದ್ದರು. ಸಂಕೋಲೆ ಕುತ್ತಿಗೆಗೆ ಬಿಗಿದ ಪರಿಣಾಮ ಮನೆಗೆ ತಲುಪಿದ ಚೇತನ್ ಅಸ್ವಸ್ಥಗೊಂಡಿದ್ದರು. ಆತನನ್ನು ಉಪಚರಿಸುವ ಪ್ರಯತ್ನ ನಡೆಸಿದ ಮನೆಯವರು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದಿದ್ದರು. ಆದರೆ ಆಸ್ಪತ್ರೆಗೆ ತಲುಪುವ ಮೊದಲೇ ಚೇತನ್ ಮೃತಪಟ್ಟಿದ್ದರು ಎನ್ನಲಾಗಿದೆ.
ಜಿಲ್ಲಾ ಎಸ್ಪಿ ರಿಷ್ಯಂತ್ ಸಿ.ಬಿ. ಘಟನೆ ನಡೆದ ಸ್ಥಳ ಮತ್ತು ಮೃತದೇಹ ಇಟ್ಟಿದ್ದ ಪುತ್ತೂರಿನ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿದ್ದ ಮೃತದೇಹವನ್ನು ಮಹಜರು ನಡೆಸಲು ಮಂಗಳೂರಿನ ದೇರಳಕಟ್ಟೆಯಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕೊಂಡೊಯ್ಯಲಾಗಿದೆ.
ತಾಯಿ ಉಮಾವತಿ, ಚೇತನ್ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿ ಸಂಪ್ಯ ಪೊಲೀಸರಿಗೆ ದೂರು ನೀಡಿದ್ದರು. ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದ ಸಂಪ್ಯ ಪೊಲೀಸರು ಪುತ್ತೂರು ಆಸ್ಪತ್ರೆಗೆ ತೆರಳಿ ಮೃತದೇಹ ಪರಿಶೀಲನೆ ನಡೆಸಿದ ವೇಳೆ ಮೃತದೇಹದ ಕುತ್ತಿಗೆಯ ಭಾಗದಲ್ಲಿ ಸಂಕೋಲೆಯಿಂದ ಬಿಗಿದ ಗುರುತು ಕಂಡುಬಂದಿತ್ತು. ಅಲ್ಲದೆ ಬೆನ್ನಿನ ಭಾಗದಲ್ಲೂ ಸಂಕೋಲೆಯ ಗುರುತು ಕಂಡು ಬಂದಿದ್ದವು. ಪೊಲೀಸರು ಮೃತನ ತಾಯಿಯನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಘಟನೆ ಬಾಯ್ಬಿಟ್ಟಿದ್ದರು.
ಆರಂಭದಲ್ಲಿ ಸಹಜ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದ ಸಂಪ್ಯ ಪೊಲೀಸರು ನಂತರದ ಬೆಳವಣಿಗೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚೇತನ್ ತಾಯಿ ಉಮಾವತಿ ಮತ್ತು ನೆರೆಯ ನಿವಾಸಿ ಯೂಸುಫ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.