

ಮಂಗಳೂರು: ಆರೋಗ್ಯ ಎನ್ನುವುದು ಮಾರುಕಟ್ಟೆಯಲ್ಲಿ ಸಿಗುವ ವಸ್ತು ಅಲ್ಲ. ನಮ್ಮ ಆರೋಗ್ಯದ ಗುಟ್ಟು ಮತ್ತು ಜುಟ್ಟು ನಮ್ಮ ಕೈಯಲ್ಲಿಯೇ ಇದೆ. ನಾವು ತಿನ್ನುವ ಆಹಾರದ ಮೇಲೆ ನಿಯಂತ್ರಣ, ನಮ್ಮ ಧನಾತ್ಮಕ ಚಿಂತನಾ ಲಹರಿ ಮತ್ತು ದೈಹಿಕ ಚಟುವಟಿಕೆಗಳಿಂದ ಕೂಡಿದ ಜೀವನ ಶೈಲಿ ಮತ್ತು ಒತ್ತಡ ಮುಕ್ತ ಕೆಲಸದ ವಾತಾವರಣ ನಾವು ಸೃಷ್ಟಿಸಿಕೊಂಡಲ್ಲಿ ನಮಗೆ ಯಾವುದೇ ರೋಗ ಬರುವ ಸಾಧ್ಯತೆ ಇಲ್ಲ ಎಂದು ಆರೋಗ್ಯ ಭಾರತಿ ಮಂಗಳೂರು ಇದರ ಗೌರವ ಅಧ್ಯಕ್ಷ ಡಾ.ಮುರಲೀ ಮೋಹನ್ ಚೂಂತಾರು ಹೇಳಿದರು.
ತಲಪಾಡಿ ಪರಿಸರದ ದೇವಿಪುರದ ಶ್ರೀ ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಆರೋಗ್ಯ ಭಾರತಿ ಮಂಗಳೂರು ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಟಾನ ಇದರ ಆಶ್ರಯದಲ್ಲಿ ಹಮ್ಮಿಕೊಂಡ ಆರೋಗ್ಯ ಮಾಹಿತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ನಮ್ಮ ಹೆಚ್ಚಿನ ಎಲ್ಲಾ ರೋಗಗಳಾದ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದಯಾಘಾತ ಮುಂತಾದ ರೋಗಗಳು ನಮ್ಮ ದೋಷಪೂರಿತ ಆಹಾರ, ಋಣಾತ್ಮಕ ಚಿಂತನೆ, ವ್ಯಾಯಾಮವಿಲ್ಲದ ಜೀವನ ಪದ್ಧತಿ ಮತ್ತು ಅತಿಯಾದ ಒತ್ತಡದ ಜೀವನ ಶೈಲಿಯಿಂದ ಬರುತ್ತದೆ ಎಂದರು.
ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಮೋಹನ್ ದಾಸ್ ರೈ ಶಾಂತಿಗುತ್ತು, ಕೇಶವ ಶಿಶುಮಂದಿರ ವ್ಯವಸ್ಥಾಪಕ ನಾರಾಯಣ ಕಜೆ, ತಲಪಾಡಿ ಗ್ರಾ.ಪಂ. ಅಧ್ಯಕ್ಷ ರಾಮಯ್ಯ ಕಿಲ್ಲೆ, ದೇವಸ್ಥಾನ ಸಮಿತಿಯ ಸದಸ್ಯರಾದ ನಿತ್ಯಾನಂದ ಮತ್ತು ನಯನ ಪಾರ್ಥಸಾರಥಿ ಉಪಸ್ಥಿತರಿದ್ದರು. ಸುಮಾರು 100 ಮಂದಿ ಈ ಶಿಬಿರದಲ್ಲಿ ಭಾಗವಹಿಸಿದ್ದರು.