ಮಂಗಳೂರು ಏರ್​ಪೋರ್ಟ್​ನಲ್ಲಿ ಆತಂಕ ಸೃಷ್ಟಿಸಿದ ಯುವಕ-ಯುವತಿ ಚಾಟಿಂಗ್​! ಮುಂಬೈ ವಿಮಾನ 5 ತಾಸು ವಿಳಂಬ

New Project(4)
Published on

ಮಂಗಳೂರು: ಬೆಕ್ಕಿಗೆ ಚಲ್ಲಾಟ, ಇಲಿಗೆ ಪ್ರಾಣ ಸಂಕಟ ಎನ್ನುವಂತೆ ಯುವಕ-ಯುವತಿ ತಮಾಷೆಗೆ ನಡೆಸಿದ ಚಾಟಿಂಗ್​ ಇಡೀ ಮಂಗಳೂರು ವಿಮಾನ ನಿಲ್ದಾಣವನ್ನೇ ಬೇಸ್ತು ಬೀಳಿಸಿದೆ. ಯುವಕ-ಯುವತಿ ನಡೆಸಿದ ಚಾಟಿಂಗ್​ ಭಾರಿ ಆತಂಕ ಸೃಷ್ಟಿಸಿದ್ದರಿಂದ ಟೇಕಾಫ್​ಗೆ ಸಿದ್ಧವಾಗಿದ್ದ ವಿಮಾನ ಸಂಚಾರವನ್ನೇ ಸ್ಥಗಿತಗೊಳಿಸಿ ತಪಾಸಣೆ ನಡೆಸಲಾಗಿದೆ. ಭದ್ರತೆ ವಿಚಾರಕ್ಕೆ ಸಂಬಂಧಿಸಿ ಚಾಟ್​ ಮಾಡಿದ್ದ ಯುವಕ-ಯುವತಿಯನ್ನು ವಶಕ್ಕೆ ಪಡೆಯಲಾಗಿದೆ.

ನಡೆದಿದ್ದೇನು?: ಉತ್ತರ ಪ್ರದೇಶದ ಗೋರಖ್​ಪುರ ಮೂಲದ ಯುವಕ ಹಾಗೂ ಯುವತಿ ಬೆಳಗ್ಗೆ 11 ಗಂಟೆಗೆ ಏರ್​ಪೋರ್ಟ್​ಗೆ ಆಗಮಿಸಿದ್ದರು. ಯುವಕ ಮುಂಬೈಗೆ ಪ್ರಯಾಣಿಸಲು ವಿಮಾನದಲ್ಲಿ ಕುಳಿತಿದ್ದ. ಯುವತಿ ಬೆಂಗಳೂರಿಗೆ ಪ್ರಯಾಣಿಸಲು ಆಗಮಿಸಿದ್ದಳು. ಈ ವೇಳೆ ಮೊಬೈಲ್​ ಫೋನ್​ನಲ್ಲಿ ಚಾಟಿಂಗ್​ ಮಾಡುತ್ತಿದ್ದ ಇವರಿಬ್ಬರು ವಿಮಾನದ ಭದ್ರತೆಗೆ ಅಪಾಯವೊಡ್ಡುವ ವಿಚಾರಗಳ ಉಲ್ಲೆಖ ಮಾಡಿದ್ದರು. ಇದನ್ನು ಗಮನಿಸಿದ ಸಹಪ್ರಯಾಣಿಕರೊಬ್ಬರು ಕೂಡಲೇ ಏರ್​ಹೋಸ್ಟಸ್​ಗೆ ಮಾಹಿತಿ ನೀಡಿದ್ದಾರೆ. ಅವರು ಪೈಲಟ್​ಗೆ ಮಾಹಿತಿ ನೀಡಿದ್ದು, ಪೈಲಟ್​ನಿಂದ ಎಟಿಸಿಗೆ ಮಾಹಿತಿ ರವಾನೆಯಾಗಿದೆ. ಕೂಡಲೇ ರನ್​ವೇನಲ್ಲಿ ಟೇಕಾಫ್​ಗೆ ಸಿದ್ಧವಾಗಿದ್ದ ವಿಮಾನವನ್ನು ತಡೆಯಲಾಗಿದೆ.

ಸ್ಥಳಕ್ಕೆ ಧಾವಿಸಿದ ಕೇಂದ್ರ ಕೈಗಾರಿಕಾ ಭದ್ರತಾಪಡೆ ಅಧಿಕಾರಿಗಳು ಮುಂಬೈ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಇಳಿಸಿ ತಪಾಸಣೆ ನಡೆಸಿದ್ದಾರೆ. ವಿಮಾನವನ್ನು ರನ್​ವೇಯಿಂದ "ಐಸೊಲೇಷನ್​ ಬೇ''ಗೆ ಕಳುಹಿಸಿದ್ದಾರೆ. ಯುವಕ ಮತ್ತು ಯುವತಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗಿದ್ದು, ವಿಚಾರಣೆ ವೇಳೆ ತಮಾಷೆಗಾಗಿ ಮಾಡಿದ್ದಾಗಿ ಹೇಳಿಕೆ ನೀಡಿದ್ದಾರೆ. ಮೊಬೈಲ್​ ವಶಕ್ಕೆ ಪಡೆದು ಚಾಟಿಂಗ್​ ಗಮನಿಸಿದಾಗ ಯುವಕನ ಭದ್ರತೆಗೆ ಅಪಾಯ ಒಡ್ಡುವ ಸಂದೇಶ ರವಾನಿಸಿರುವುದು ಪತ್ತೆಯಾಗಿತ್ತು.

ಯುವತಿ ಬೆಂಗಳೂರಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದರೆ, ಯುವಕ ಮುಂಬೈನಲ್ಲಿ ಉದ್ಯೋಗಕ್ಕೆ ಸೇರ್ಪಡೆಯಾಗಲು ತೆರಳುವವನಿದ್ದ. ಯುವಕ ಈ ಹಿಂದೆ ಮಣಿಪಾಲದಲ್ಲಿ ಓದಿದ್ದು, ಮೂರು ದಿನಗಳಿಂದ ಯುವತಿ ಜತೆಯಾಗಿ ಮಣಿಪಾಲ ಸುತ್ತಮುತ್ತ ಓಡಾಡಿಕೊಂಡಿದ್ದರು. ಭಾನುವಾರ ಸುತ್ತಾಟ ಮುಗಿಸಿ ಬೆಳಗ್ಗೆ ಜತೆಯಾಗಿಯೇ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.

ಯುವಕ ಹಾಗೂ ಯುವತಿಯನ್ನು ವಿಮಾನ ನಿಲ್ದಾಣ ಪೊಲೀಸರು ಬಜಪೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಮುಂಬೈಗೆ ಹೋಗಬೇಕಿದ್ದ ವಿಮಾನ ಸಂಜೆ 4 ಗಂಟೆ ವೇಳೆಗೆ ಪ್ರಯಾಣಿಸಿದೆ. 186 ಪ್ರಯಾಣಿಕರಿದ್ದರು.

ವಿಮಾನ ವಿಳಂಬ: ಚಾಟಿಂಗ್​ ವಿದ್ಯಮಾನದಿಂದ ವಿಮಾನ ನಿಲ್ದಾಣಕ್ಕೆ ಬರುವ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳು ತಡವಾಗಿ ಲ್ಯಾಂಡಿಂಗ್​ ಹಾಗೂ ಟೇಕಾಫ್​ ಆಗಿವೆ. ದುಬೈನಿಂದ ಬಂದು 3.15ಕ್ಕೆ ಲ್ಯಾಂಡ್​ ಆಗಬೇಕಿದ್ದ ವಿಮಾನ 4 ಗಂಟೆಗೆ ಲ್ಯಾಂಡ್​ ಆಗಿದೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net