ಚುನಾಯಿತ ಜನಪ್ರತಿನಿಧಿಗಳ ಯೋಚನಾಶಕ್ತಿಯನ್ನೇ ಹಾಳು ಮಾಡಿದ ಕಾಂಗ್ರೆಸ್​: ಬಿ.ಎಲ್.ಸಂತೋಷ್

bl santhosh
Published on

ಬೆಂಗಳೂರು: ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರ, ಸ್ವಪಕ್ಷಪಾತ, ಕುಟುಂಬ ರಾಜಕಾರಣದಿಂದ ಚುನಾಯಿತ ಜನಪ್ರತಿನಿಧಿಗಳ ಯೋಚನಾಶಕ್ತಿಯನ್ನೇ ಹಾಳು ಮಾಡಿ ಅವರ ದಿಕ್ಸೂಚಿಯನ್ನೇ ಬದಲಾಯಿಸಿರುವುದು ದುರಂತ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಟೀಕಿಸಿದರು.

ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿ ಸೋಮವಾರ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಮಾತನಾಡಿದರು. ಗ್ರಾಮ ಪಂಚಾಯಿತಿ ಸದಸ್ಯರಿಗೆ ಇರುವ ಅಧಿಕಾರ ದೆಹಲಿಯ ಯಾವ ನಾಯಕರಿಗೂ ಇಲ್ಲ. ಅಧಿಕಾರ ಅನ್ನೋದು ಜನರ ಸೇವೆಗಿದೆ. ಒಂದು ಮೈಕ್ ಮೂಲಕ ಜನರಿಗೆ ನೀರು ತಲುಪಿಸಬಹುದು. ಜನಸಾಮಾನ್ಯರ ಸಮಸ್ಯೆಗಳನ್ನು ಹತ್ತಿರದಿಂದ ನೋಡಿ ಬಗೆಹರಿಸುವ ಅವಕಾಶ ಸಿಗುತ್ತದೆ. ಅದನ್ನು ಸದ್ಬಳಕೆ ಮಾಡಿಕೊಂಡು ಜನರಿಗೆ ಸಾಕಷ್ಟು ಸವಲತ್ತು ಕಲ್ಪಿಸಲು ಉತ್ತಮ ವೇದಿಕೆಯಾಗಲಿದೆ ಎಂದು ಸಲಹೆ ನೀಡಿದರು.

ಗಾಂಧಿಯವರ ಗ್ರಾಮ ಸ್ವರಾಜ್ಯ ಚಿಂತನೆಯನ್ನು ಪಂಡಿತ್ ದೀನದಯಾಳ್ ಅಂತ್ಯೋದಯ ಎಂದರು, ಸರ್ವೋದಯ ಎಂದರೂ ಅದೇ ಆಗಿದೆ. ಗ್ರಾಮ ಪಂಚಾಯಿತಿಗಳು ಉತ್ತಮ ಗುಣಮಟ್ಟ ಆಡಳಿತ ನೀಡಿ ಸಮಾಜದ ಮುಖ್ಯವಾಹಿನಿಗೆ ಜನರನ್ನು ತರುವುದೇ ಎಲ್ಲರ ಉದ್ದೇಶ ಎಂದು ಬಿ.ಎಲ್.ಸಂತೋಷ್ ಹೇಳಿದರು.

ಗ್ರಾಮ ಪಂಚಾಯಿತಿಗಳಲ್ಲಿ ಹೈನುಗಾರಿಕೆ, ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆ. ಸ್ಥಳೀಯ ಉತ್ಪಾದನೆಗೆ ಉತ್ತೇಜಿಸಲು ಗ್ರಾಮ ಪಂಚಾಯಿತಿ ಸದಸ್ಯರು ಸ್ವಯಂ ಪ್ರೇರಿತ ನಿರ್ಧಾರಗಳು ಕೈಗೊಳ್ಳಬೇಕು ಎಂದು ತಿಳಿಸಿದರು.

ಪಕ್ಷದ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಕುಮಾರ್, ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ನಾರಾಯಣ್, ಮುಖಂಡರಾದ ಕಡತನಮಲೆ ಸತೀಶ್, ಹನುಮೇಗೌಡ ಸೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net