

ಯಾದಗಿರಿ: ಇಬ್ಬರು ಹೆಂಡತಿಯರಿಗೆ ಕೈಕೊಟ್ಟ ಸರ್ಕಾರಿ ಶಾಲೆ ಶಿಕ್ಷಕನೊಬ್ಬ ಮತ್ತೊಬ್ಬಳನ್ನು ಮದುವೆಯಾಗಿ ಸಿಕ್ಕಿಬಿದ್ದು, ಸೇವೆಯಿಂದ ಅಮಾನತು ಆಗಿದ್ದಾನೆ. ಅಷ್ಟೇ ಅಲ್ಲ ಇದೀಗ ಆತನ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ.
ಸೈದಾಪುರ ಹತ್ತಿರದ ನೀಲಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಮುಖ್ಯ ಶಿಕ್ಷಕ ಮೋಹನರಡ್ಡಿ ಸಂಗಾರಡ್ಡಿ ಮೂವರು ಹೆಣ್ಣುಮಕ್ಕಳ ಜೀವನದಲ್ಲಿ ಆಟವಾಡಿದ್ದಾನೆ. 1988ರಲ್ಲಿ ಸುರಪುರ ತಾಲೂಕಿನ ಬೋನಾಳ ಗ್ರಾಮದ ತಿಪ್ಪಮ್ಮಳನ್ನು ವರಿಸಿದ್ದ ಈತ, 1992ರಲ್ಲಿ ವಡಗೇರಾ ತಾಲೂಕಿನ ಜೋಳದಡಗಿ ಗ್ರಾಮದ ದೇವಮ್ಮ ಜತೆ ಮದುವೆಯಾಗಿದ್ದಾನೆ. ಇಷ್ಟು ಸಾಲದೆಂಬಂತೆ 2007ರಲ್ಲಿ ವಿಜಯಪುರ ಜಿಲ್ಲೆಯ ತುಂಬಗಿ ಗ್ರಾಮದ ಗುರುಸಂಗಮ್ಮ ಎಂಬಾಕೆ ಕೈ ಹಿಡಿದಿದ್ದಾನೆ.
ಅಚ್ಚರಿ ಎಂದರೆ, ಮೊದಲ ಇಬ್ಬರು ಹೆಂಡತಿಯರಿಗೆ ಈತ ಮೂರನೇ ಮದುವೆಯಾಗಿದ್ದು ಗೊತ್ತೇ ಇರಲಿಲ್ಲ. ಇತ್ತೀಚೆಗಷ್ಟೇ ಎರಡನೇ ಪತ್ನಿ ದೇವಮ್ಮಗೆ ಕಿರುಕುಳ ನೀಡಿ ಮನೆಯಿಂದ ಆಚೆ ಹಾಕಲು ಮುಂದಾಗಿದ್ದ. ಆಕೆ ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದ್ದೇ ತಡ ತಾನು ಮತ್ತೊಂದು ಮದುವೆಯಾಗಿದ್ದಾಗಿ ಬಾಯ್ಬಿಟ್ಟಿದ್ದಾನೆ.
ಹೀಗಾಗಿ ಮೊದಲ ಇಬ್ಬರು ಪತ್ನಿಯರು ಪತಿ ಮೋಸ ಮಾಡಿದ್ದು, ನ್ಯಾಯ ದೊರಕಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳ ಬಳಿ ಅಳಲು ತೋಡಿಕೊಂಡಿದ್ದಾರೆ. ವಿಚಾರಣೆ ನಡೆಸಿದ ಡಿಡಿಪಿಐ ಶಾಂತಗೌಡ ಪಾಟೀಲ್, ಶಿಕ್ಷಕ ಮೋಹನರೆಡ್ಡಿ ಮೂರು ಮದುವೆಯಾಗಿದ್ದನ್ನು ಖಚಿತಪಡಿಸಿಕೊಂಡು ಸೇವೆಯಿಂದ ಅಮಾನತುಗೊಳಿಸಿದ್ದಾರೆ.
ಪತ್ನಿಯರು ಪತಿಯಿಂದಾದ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಡುವಂತೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ನ್ಯಾಯ ಕೊಡಿಸುವಂತೆ ಇಬ್ಬರು ಪತ್ನಿಯರು ಹಾಗೂ ಅವರ ಮಕ್ಕಳು ನಿನ್ನೆ(ಸೋಮವಾರ) ಯಾದಗಿರಿ ಪೊಲೀಸ್ ವರಿಷ್ಠಾಧಿಕಾರಿ ವೇದಮೂರ್ತಿ ಬಳಿ ಮನವಿ ಮಾಡಿದ್ದರು. ಸೈದಾಪೂರ ಪೊಲೀಸ್ ಠಾಣೆಯಲ್ಲಿ ಮೋಹನರೆಡ್ಡಿ ಪಾಟೀಲ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಆರೋಪಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಕ್ಕಳ ಭವಿಷ್ಯ ರೂಪಿಸಬೇಕಿದ್ದ ಶಿಕ್ಷಕ ಮದುವೆ ಆಗುವುದನ್ನೇ ಖಯಾಲಿ ಮಾಡಿಕೊಂಡಿದ್ದು ವರ್ತಮಾನದ ದುರಂತ.