

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ನೌಕರಿಗಾಗಿ ನೀವು ಹುಡುಕಾಟ ನಡೆಸುತ್ತಿದ್ದೀರಾ? ಅಥವಾ ಅರ್ಜಿ ಸಲ್ಲಿಸಿದ್ದೀರಾ? ಎಚ್ಚರ! ಆಕಸ್ಮಿಕವಾಗಿ ವಾಟ್ಸ್‌ಆ್ಯಪ್‌ನಲ್ಲಿ ಪರಿಚಯನಾದ ವ್ಯಕ್ತಿಯೊಬ್ಬ ಕೆನಡಾದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಮ್ಯಾನೇಜರ್ ಹುದ್ದೆ ಕೊಡಿಸುವ ಆಮಿಷವೊಡ್ಡಿ ಮಹಿಳೆಯಿಂದ ಬರೋಬ್ಬರಿ 18.41 ಲಕ್ಷ ರೂ. ಪಡೆದು ಮೋಸ ಮಾಡಿದ್ದಾನೆ. ನೊಂದ ಮಹಿಳೆ ಉತ್ತರ ವಿಭಾಗ ಸಿಇಎನ್ ಠಾಣೆ ಪೊಲೀಸರ ಮೊರೆ ಹೋಗಿದ್ದಾರೆ.
ರಾಜಾಜಿನಗರದ 44 ವರ್ಷದ ಮಹಿಳೆ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈಕೆಗೆ ವಾಟ್ಸ್‌ಆ್ಯಪ್‌ನಲ್ಲಿ ಪರಿಚಯನಾದ ಅಪರಿಚಿತ ವ್ಯಕ್ತಿ, ಕೆನಡಾದ ಟೊರ್ಯಾಂಟೊ ಜನರಲ್ ಆಸ್ಪತ್ರೆಯಲ್ಲಿ ವ್ಯವಸ್ಥಾಪಕರ ಹುದ್ದೆ ಖಾಲಿ ಇದೆ. ಕೈ ತುಂಬ ವೇತನ ಸಿಗಲಿದೆ. ನೀವು ಬಯಸಿದರೆ ಕೊಡಿಸುವುದಾಗಿ ಭರವಸೆ ನೀಡಿದ್ದಾನೆ. ಅದಕ್ಕೆ ಒಪ್ಪಿದ ಮಹಿಳೆಯಿಂದ ವಿಸಾ ಅಪ್ಲೀಕೇಷನ್ ಶುಲ್ಕ, ಪೊಲೀಸ್ ಪರಿಶೀಲನಾ ಪ್ರಮಾಣಪತ್ರ, ಮೆಡಿಕಲ್ ಸರ್ಟಿಫಿಕೇಟ್, ವಿಮಾ ಪಾಲಿಸಿ, ಬಯೋಮೆಟ್ರಿಕ್ ಎಂದು ನಾನಾ ಕಾರಣ ಹೇಳಿ ಹಂತ ಹಂತವಾಗಿ 18.41 ಲಕ್ಷ ರೂ. ವಸೂಲಿ ಮಾಡಿದ್ದಾನೆ.
ಮತ್ತೆ ಮತ್ತೆ ಹಣ ಕೇಳಿದಾಗ ಅನುಮಾನ ಬಂದು ಮಹಿಳೆ ಹಣ ವಾಪಸ್ ಕೇಳಿದ್ದಾರೆ. ಕೊನೆಗೆ ಸೈಬರ್ ವಂಚಕ ಮೊಬೈಲ್ ಸಂಪರ್ಕ ಕಡಿತ ಮಾಡಿಕೊಂಡಿದ್ದಾನೆ. ನೊಂದ ಮಹಿಳೆ ಠಾಣೆಗೆ ದೂರು ನೀಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೆಲಸದ ಆಮಿಷವೊಡ್ಡಿ ಲಕ್ಷಾಂತರ ರೂ. ಪಡೆದು ಮೋಸ ಮಾಡುವ ಸೈಬರ್ ವಂಚಕರ ಜಾಲ ಸಕ್ರಿಯವಾಗಿದ್ದು, ಇಂತಹ ಹಲವು ಪ್ರಕರಣಗಳು ನಗರ ಸಿಇಎನ್ ಠಾಣೆಯಲ್ಲಿ ದಾಖಲಾಗಿವೆ.