

ಮಾಗಡಿ : ಮಹಿಳೆ ಸ್ವಾಭಿಮಾನದ ಪ್ರತೀಕ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಜಯಪಾಲು ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ರೂಟ್ಸ್ ಫಾರ್ ಫ್ರೀಡಂ ಸಂಘಟನೆ ವತಿಯಿಂದ ವಿಶ್ವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಬಲೀಕರಣ ಮತ್ತು ಆರ್ಥಿಕಾ ಸವಾಲು ಕುರಿತು ವಿಚಾರ ಸಂಕೀರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿ ದಿನ ಆಚರಿಸಬೇಕು. ವಿಶ್ವದಾದ್ಯಂತ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ,. ಪ್ರತಿನಿತ್ಯ ಮಹಿಳೆಯರು ಇಲ್ಲದೆ ಜೀವನ ನಡೆಸುವುದು ಕಷ್ಟ. ಅವರಿಗೆ ಸಲ್ಲಿಸಬೇಕಾದ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮಹಿಳೆ ಇಂದು ಎಲ್ಲ ರಂಗದಲ್ಲೂ ಸಾಧನೆ ಮಾಡುತ್ತಿದ್ದಾರೆ. ಅವರ ಸಾಧನೆಗೆ ನಾವೆಲ್ಲರೂ ಮತಷ್ಟು ಸಹಕಾರ ನೀಡಿದರೆ ಮಹಿಳಾ ದಿನಾಚರಣೆಗೆ ಅರ್ಥ ಬರುತ್ತದೆ ಎಂದರು.
ರೂಟ್ಸ್ ಫಾರ್ ಫ್ರೀಡಂ ಸಂಘಟನೆಯ ರಾಜ್ಯ ಸಂಚಾಲಕಿ ಡಾ.ರತ್ನಮ್ಮ ಮಾತನಾಡಿ, ಹೆಣ್ಣು ಸಮಾಜದ, ಸಂಸಾರದ ಕಣ್ಣು, ಎಲ್ಲ ಸವಾಲುಗಳನ್ನು ಎದುರಿಸಿಕೊಂಡು ದಿಟ್ಟ ಹೆಜ್ಜೆ ಇಡುತ್ತಿದ್ದಾಳೆ, ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಎಲ್ಲ ರಂಗದಲ್ಲೂ ಸವಾಲುಗಳನ್ನು ಎದುರಿಸುತ್ತಿದ್ದಾಳೆ, ಮಹಿಳೆಯರು ಎಷ್ಟೇ ವಿದ್ಯಾವಂತವರಾದರೂ ರಾಜಕೀಯವಾಗಿ ಮುಖ್ಯವಾಹಿನಿಗೆ ಬರಲು ಸಂಕಷ್ಟ ಎದುರಿಸುತ್ತಿದ್ದಾರೆ. ಅದರಿಂದ ಹೊರಬರಬೇಕಿದೆ, ಪ್ರತಿ ಹಂತದಲ್ಲೂ ಮಹಿಳೆ ಮುಂಚೂಣಿಯಲ್ಲಿದ್ದು, ಪ್ರತಿ ಹಂತದಲ್ಲೂ ಹೆಚ್ಚು ಜವಾಬ್ದಾರಿವಹಿಸಿದ್ದಾರೆ. ರಾಜಕೀಯವಾಗಿ ಇನ್ನೂ ಶೇ.33 ಸ್ಥಾನ ಮಾನ ಸಿಕ್ಕಿಲ್ಲ. ಸಮರ್ಪಕವಾಗಿ ಸಿಕ್ಕರೆ ಸ್ವತಂತ್ರ್ಯವಾಗಿ ಸಮಾನತೆ ಎತ್ತಿಹಿಡಿಯುವ ಕೆಲಸ ಮಹಿಳೆಯರು ಮಾಡಬಹುದು ಎಂದರು.
ಜಿಲ್ಲಾ ಸಂಚಾಲಕ ಜೀವಿಕ ಗಂಗಹನುಮಯ್ಯ ಮಾತನಾಡಿ, ಸಂವಿಧಾನದಡಿ ಮಹಿಳೆಯರಿಗೆ ನೀಡಬೇಕಾದ ಸ್ಥಾನಮಾನ ನೀಡುವಲ್ಲಿ ಇನ್ನೂ ಮುಂದಾಗದೆ ಇರುವುದು ದುರಂತ. ಮಹಿಳೆಯರು ಮುಖ್ಯವಾಹಿನಿಗೆ ಬರಲಿ ಎಂಬ ನಿಟ್ಟಿನಲ್ಲಿ ಮಹಿಳಾ ದಿನಾಚರಣೆ ಆಚರಿಸುವ ಮೂಲಕ ಅವರಿಗೆ ಧ್ವನಿಯಾಗಿದ್ದೇವೆ ಎಂದರು.
ಪೊಲೀಸ್ ಸಿಬ್ಬಂದಿ ಸುವರ್ಣ ಮಾತನಾಡಿ, ದೇಶವನ್ನು ನಡೆಸುವ ಶಕ್ತಿ ಮಹಿಳೆಯರಿಗಿದೆ. ಮಹಿಳೆಯರು ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕು. ಗ್ರಾಮೀಣ ಹೆಣ್ಣು ಮಕ್ಕಳನ್ನು ಶಾಲೆಗಳಿಗೆ ಸೇರಿಸದೆ ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿದ್ದಾರೆ. ಅಂತಹ ಕೆಲಸ ಮಾಡದೆ ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ ಸಮಾಜದ ಸತ್ಪ್ರಜೆಯನ್ನಾಗಿ ಮಾಡಿ ಎಂದರು.
ಪುರಸಭಾ ಸದಸ್ಯ ರಂಗಹನುಮಯ್ಯ, ವಲಯ ಅರಣ್ಯಾಧಿಕಾರಿ ಚೈತ್ರಾ, ತಾಪಂ ಮಾಜಿ ಸದಸ್ಯ ಸಿ.ಜಯರಾಮು, ದೊಡ್ಡಿ ಲಕ್ಷ್ಮಣ, ಮಧು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುಳಾ, ವನಜಾ, ಮೀನಾಕ್ಷ್ಯಿ, ಎಎಸ್‌ಐ ಕೃಷ್ಣಪ್ಪ, ಕುದೂರು ಉಮೇಶ್, ದಲಿತ ಸೇನೆ ನಾಗರಾಜು, ಸಿ.ಕುಮಾರ್, ಗೋಪಾಲ್ ಇತರರು ಇದ್ದರು.