

ಮಳವಳ್ಳಿ: ತಾಲೂಕಿನ ಹಾಡ್ಲಿ ಸರ್ಕಲ್ ಸಮೀಪದ ಕಲ್ಯಾಣ ಮಂಟಪ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೈಕ್‌ವೊಂದು ಮತ್ತೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟು, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಕಂದೇಗಾಲ ಗ್ರಾಮದ ರಾಮಕೃಷ್ಣ ಎಂಬುವರ ಪತ್ನಿ ಉಮಾ (36) ಮೃತರು. ವೀರೇಶ್ ಮತ್ತು ರಿತು ಎಂಬುವರು ಗಾಯಗೊಂಡವರಾಗಿದ್ದಾರೆ. ಉಮಾ ಅವರು ಬಾಣಸಮುದ್ರ ಗ್ರಾಮದಿಂದ ಸೋದರ ಸಂಬಂಧಿ ವೀರೇಶ್ ಎಂಬುವರೊಡನೆ ಬೈಕ್‌ನಲ್ಲಿ ಸ್ವಗ್ರಾಮಕ್ಕೆ ಬರುತ್ತಿದ್ದಾಗ ಆಂಧ್ರ ಮೂಲದ ರಿತು ಎಂಬಾತ ವೇಗವಾಗಿ ಬೈಕ್‌ನಲ್ಲಿ ಬಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ರಭಸವಾಗಿ ಬಿದ್ದಿದ್ದರಿಮದ ಎರಡೂ ಬೈಕ್‌ಗಳಲ್ಲಿದ್ದ ಸವಾರರು ತೀವ್ರವಾಗಿ ಗಾಯಗೊಂಡಿದ್ದು, ಕೂಡಲೇ ಸ್ಥಳೀಯರು ಎಲ್ಲರನ್ನೂ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲು ಅನುವಾಗಿದ್ದಾರೆ. ಆದರೆ ಮಾರ್ಗ ಮಧ್ಯೆ ಉಮಾ ಸಾವಿಗೀಡಾಗಿದ್ದಾರೆ. ಉಳಿದ ಗಾಯಾಳುಗಳಿಗೆ ಪ್ರಥಮ ಚಿಕತ್ಸೆ ನೀಡಿ ಜಿಲ್ಲಾ ಆಸ್ಪತ್ರೆ ರವಾನಿಸಲಾಗಿದೆ. ಮಹಿಳೆಯ ಮೃತದೇಹವನ್ನು ಶವಾಗಾರದಲ್ಲಿರಿಸಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.