

ಬೆಂಗಳೂರು: ಶಕ್ತಿಸೌಧದಲ್ಲಿ ಸಚಿವ ಈಶ್ವರಪ್ಪ ವಿರದ್ಧ ಕಾಂಗ್ರೆಸ್ ಅಹೋರಾತ್ರಿ ಧರಣಿ ಭಾರೀ ಸದ್ದು ಮಾಡುತ್ತಿದೆ. ಇದರ ನಡುವೆಯೇ ಕೊತ್ವಾಲ್ಪುರ ಮತ್ತು ಕೊತ್ವಾಲ್ ರಾಮಚಂದ್ರನ ಶಿಷ್ಯರು... ಪದವೂ ಸದ್ದು ಮಾಡುತ್ತಿದೆ.
ಕೊತ್ವಾಲ್ ರಾಮಚಂದ್ರನ ಶಿಷ್ಯರು ಕಾಂಗ್ರೆಸ್ನಲ್ಲಿದ್ದಾರೆ ಎಂಬ ಹೇಳಿಕೆ ರಾಜಕೀಯ ದುರುದ್ದೇಶದ್ದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಗರಂ ಆದರು. ವಿಧಾನಸೌಧ ಮೊಗಸಾಲೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ನಾನು ಕಾಂಗ್ರೆಸ್ಗೆ ಬಂದು 40 ವರ್ಷ ಆಗಿದೆ. ಕೊತ್ವಾಲ್ ರಾಮಚಂದ್ರ ತೀರಿಕೊಂಡು 40 ವರ್ಷಗಳಾಗಿವೆ. ಕೊತ್ವಾಲ್ ಮೂಲತಃ ಶಿವಮೊಗ್ಗ ಜಿಲ್ಲೆಯವರು. ಅವರ ಶಿಷ್ಯಂದಿರೇ ಬಿಜೆಪಿಯಲ್ಲಿದ್ದಾರೆ. ಈ ಹಿಂದೆ ಗಡಿಪಾರಾಗಿದ್ದವರು ಈಗ ಕೇಂದ್ರದಲ್ಲಿ ಗೃಹ ಸಚಿವರಾಗಿದ್ದಾರೆ. ಸಿ.ಟಿ.ರವಿಗೆ ಧೈರ್ಯವಿದ್ದರೆ ಅವರ ಬಗ್ಗೆ ಮಾತಾಡಲಿ ಎಂದು ಕೆಣಕಿದರು.
ಗುರುವಾರ ಕಲಾಪದಲ್ಲಿ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರು ರಾಷ್ಟ್ರದ ಇತಿಹಾಸ, ಪ್ರಸ್ತುತ ವಿದ್ಯಮಾನ ಪ್ರಸ್ತಾಪಿಸುತ್ತಾ ಆರ್ಎಸ್ಎಸ್, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವ್ಯಂಗ್ಯ ಪದ ಪ್ರಯೋಗ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿಯ ಆಯನೂರು ಮಂಜುನಾಥ್, ಪ್ರಚೋದನಕಾರಿ ಮಾತು ನಮಗೂ ಬರುತ್ತೆ. ಬುಧವಾರ ನೀವು ಹಾವಿನಪುರವೆಂದಿರಿ, ನಾನು ಕೊತ್ವಾಲ್ಪುರ ಎನ್ನಬಲ್ಲೇ ಎನ್ನುತ್ತಿದ್ದಂತೆ ಕೈ ಸದಸ್ಯರು ಏಕಕಾಲಕ್ಕೆ ಎದ್ದು ನಿಂತು ಆಕ್ಷೇಪಿಸಿದ್ದರು. ಹರಿಪ್ರಸಾದ್ ಮತ್ತು ಆಯನೂರು ಮಂಜುನಾಥ್ ನಡುವಿನ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿತ್ತು.
"ಕೊತ್ವಾಲ್ಪುರದ ಶಿಷ್ಯ, ಚಮಚಾಗಿರಿ, ಕಂಡವರ ಮನೆ ಬಾಗಿಲು ಕಾಯ್ದು ರಾಜಕೀಯ ಸ್ಥಾನಮಾನ ಗಿಟ್ಟಿಸಿಕೊಂಡವನಲ್ಲ. ತಾಕತ್ತಿದ್ದರೆ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಬಾ'' ಎಂದು ಆಯನೂರು ಏರಿದ ಧ್ವನಿಯಲ್ಲಿ ಸವಾಲೆಸೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಹರಿಪ್ರಸಾದ್, ''ಕೊತ್ವಾಲ್ಪುರ ಬೆಳೆಯುವುದಕ್ಕೆ ಶಿವಮೊಗ್ಗದವರೇ ಕಾರಣ'' ಎಂದು ದೂರಿದ್ದರು. ಈ ಹಿಂದೆ ಹಲವು ಬಾರಿ ಸಿ.ಟಿ.ರವಿ, ''ನಾನು ಕೊತ್ವಾಲ್ ಚೇಲಾ ಅಲ್ಲ'' ಎಂದು ಡಿಕೆಶಿ ವಿರುದ್ಧ ಹರಿಹಾಯ್ದಿದ್ದರು.