ವರ್ಷಾಂತ್ಯಕ್ಕೆ ವಾರಾಹಿ ಧಾರೆ

tank
ಮುದರಂಗಡಿ ಗ್ರಾಮದ ಪೈಪ್‌ಲೈನ್ ಸಂಪರ್ಕವಾಗದ ಓವರ್‌ಹೆಡ್ ಟ್ಯಾಂಕ್.
Published on

ಹೇಮನಾಥ್ ಪಡುಬಿದ್ರಿ

ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ಶೇ.80 ಪೂರ್ಣಗೊಂಡಿದ್ದು, ಎಲ್ಲವೂ ಅಂದುಕೊಂಡಂತೆ ಸಾಗಿದರೆ 2025ರ ಡಿಸೆಂಬರ್ ಅಂತ್ಯಕ್ಕೆ ಕಾಪು ತಾಲೂಕಿಗೆ ವಾರಾಹಿ ನೀರು ಬರುವ ನಿರೀಕ್ಷೆ ಹೊಂದಲಾಗಿದೆ.

2024ರ ಮಾರ್ಚ್ ಅಂತ್ಯಕ್ಕೆ ಜೆಜೆಎಂ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಕೆಲ ತಾಂತ್ರಿಕ ತೊಡಕುಗಳಿಂದ ಹಿನ್ನಡೆಯಾಗಿದ್ದು, ಯೋಜನೆ ಮುಕ್ತಾಯಗೊಳಿಸಲು 2026ರವರೆಗೆ ಗಡುವು ನೀಡಲಾಗಿದೆ. ತಾಲೂಕಿನಲ್ಲಿ ಜೆಜೆಎಂ ಪ್ರಥಮ ಹಾಗೂ ದ್ವಿತೀಯ ಹಂತದ ಕಾಮಗಾರಿ ಪೂರ್ಣಗೊಂಡು, ತೃತೀಯ ಹಂತದ ಕಾಮಗಾರಿ ಪ್ರಗತಿಯಲ್ಲಿವೆ. ಬಡಾ, ತೆಂಕ, ಹೆಜಮಾಡಿ, ಇನ್ನಂಜೆಯಲ್ಲಿ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಕೆಲವೆಡೆ ಓವರ್ ಹೆಡ್ ಟ್ಯಾಂಕ್ ನಿರ್ಮಾಣವಾಗಿದ್ದರೂ ಇನ್ನೂ ಕೆಲವೆಡೆ ಓವರ್ ಹೆಡ್ ಟ್ಯಾಂಕ್ ನಿರ್ಮಾಣವಾಗಬೇಕಿದೆ. ತಾಲೂಕಿನಲ್ಲಿ 3 ಗುತ್ತಿಗೆದಾರರು ಕಾಮಗಾರಿ ನಿರ್ವಹಿಸುತ್ತಿದ್ದು ಅದರೊಂದಿಗೆ ವಾರಾಹಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಗುತ್ತಿಗೆದಾರ ಕೆಲಸ ಪ್ರಗತಿಯಲ್ಲಿದೆ.

*ಹೆಚ್ಚುತ್ತಿದೆ ನೀರಿನ ಸಂಪರ್ಕ ಬೇಡಿಕೆ: ಕಾಪು ತಾಲೂಕಿನಲ್ಲಿ 32,656 ಮನೆಗಳಿಗೆ ನೀರಿನ ಸಂಪರ್ಕ ಗುರಿಯಿದ್ದು, 25,162 ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. 7,494 ಸಂಪರ್ಕ ಬಾಕಿಯಿದೆ. ಯೋಜನೆ ಅನುಷ್ಠಾನ ಆರಂಭದಲ್ಲಿ ಗ್ರಾಪಂಗಳು ಠೇವಣಾತಿ ಪಡೆದು ನೀರಿನ ಸಂಪರ್ಕಕ್ಕೆ ಬೇಡಿಕೆ ಪಡೆಯುತ್ತಿದ್ದುದರಿಂದ ತಾಲೂಕಿನ ಗ್ರಾಮಗಳಲ್ಲಿ ನೀರಿನ ಸಂಪರ್ಕ ಪಡೆಯಲು ಜನ ಹಿಂದೇಟು ಹಾಕಿದ್ದರು. ಇದೀಗ ಆ ಮಾನದಂಡ ತೆಗೆಯಲಾಗಿದ್ದು, ಪೂರೈಕೆಗೆ ಅವಕಾಶವಿದ್ದಲ್ಲಿ ಬೇಡಿಕೆ ಸಲ್ಲಿಸಿದವರಿಗೆ ಸಂಪರ್ಕ ಕಲ್ಪಿಸಲಾಗುತ್ತಿದೆ.

7 ಗ್ರಾಮಗಳಿಗೆ ಪಾಪನಾಶಿನಿ ನೀರು: ಕಾಪು ಪುರಸಭೆ ಸಹಿತ ತಾಲೂಕಿನ ಕುರ್ಕಾಲು, ಕಟಪಾಡಿ, ಕೋಟೆ ಮತ್ತು ಇನ್ನಂಜೆ ಗ್ರಾಪಂ ವ್ಯಾಪ್ತಿಯ 7 ಗ್ರಾಮಗಳಾದ ಕುರ್ಕಾಲು, ಮೂಡಬೆಟ್ಟು, ಏಣಗುಡ್ಡೆ, ಕೋಟೆ, ಮಟ್ಟು, ಇನ್ನಂಜೆ ಹಾಗೂ ಪಾಂಗಾಳ ಗ್ರಾಮಗಳಿಗೆ ಕುರ್ಕಾಲು ಗ್ರಾಮದ ಮಣಿಪುರ ಬಳಿಯ ಪಾಪನಾಶಿನಿ ಹೊಳೆಗೆ ನಿರ್ಮಿಸಿದ ಅಣೆಕಟ್ಟಿನಿಂದ ನೀರು ಸರಬರಾಜಾಗಲಿದೆ. ಪುರಸಭೆ ವ್ಯಾಪ್ತಿಗೆ ಈಗಾಗಲೆ ಪ್ರಾಯೋಗಿಕವಾಗಿ ನೀರು ಪೂರೈಸಲಾಗುತ್ತಿದೆ. ಉಳಿದ ಗ್ರಾಮಗಳ ನೀರು ಪೂರೈಕೆ ಯೋಜನೆ ಟೆಂಡರ್ ಹಂತದಲ್ಲಿದೆ.

ಈಗಿರುವ ನೀರಿನ ಮೂಲಗಳೇ ಆಧಾರ

ವಾರಾಹಿ ಯೋಜನೆ ಪೂರ್ಣಗೊಳ್ಳದ ಕಾರಣ ಕಲ್ಪಿಸಿದ ಮನೆ ಸಂಪರ್ಕಗಳಿಗೆ ಗ್ರಾಮದಲ್ಲಿರುವ ನೀರಿನ ಮೂಲಗಳೇ ಆಧಾರ. ಕೆಲ ಗ್ರಾಮಗಳಲ್ಲಿ ನೀರಿನ ಮೂಲ ಕಲ್ಪಿಸುವ ಮೊದಲೇ ತುರ್ತಾಗಿ ಪೈಪ್‌ಲೈನ್ ಅಳವಡಿಸಿದಲ್ಲಿ ಸಂಪರ್ಕ ನೀಡಿದರೂ ಒಂದು ಹನಿ ನೀರು ತೊಟ್ಟಿಕ್ಕದೆ ಜನ ಹಿಡಿಶಾಪ ಹಾಕುತ್ತಿದ್ದಾರೆ.

ಅಪಾಯ ಆಹ್ವಾನಿಸುವ ಪೈಪ್‌ಗಳು

ಯೋಜನೆ ಮಾನದಂಡದಂತೆ 3 ಅಡಿ ಆಳದಲ್ಲಿ ಪೈಪ್‌ಲೈನ್ ಅಳವಡಿಸಬೇಕಾಗಿದ್ದರೂ ಅದನ್ನು ಉಲ್ಲಂಘಿಸಿ ಮೇಲ್ಮಟ್ಟದಲ್ಲಿ ಪೈಪ್ ಅಳವಡಿಕೆ ಹಾಗೂ ಪೈಪ್‌ಲೈನ್ ಅಳವಡಿಕೆಗೆ ರಸ್ತೆ ಅಗೆದು ಸಮರ್ಪಕವಾಗಿ ಮುಚ್ಚದೆ ಜನರು, ವಾಹನ ಸವಾರರ ಸಂಚಾರಕ್ಕೆ ಧಕ್ಕೆಯಾಗುತ್ತಿದೆ. ಈ ಬಗ್ಗೆ ಗ್ರಾಮಸಭೆಗಳಲ್ಲಿ ಚರ್ಚೆಗೆ ಗ್ರಾಸವಾಗುತ್ತಿದ್ದರೂ ಪರಿಹಾರ ಶೂನ್ಯ. ಇದು ಯೋಜನೆ ಗುಣಮಟ್ಟವನ್ನು ಅಣಕಿಸುವಂತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ವಾರಾಹಿ ನೀರು ಸರಬರಾಜು ಆದಲ್ಲಿ ಕಾಪುವಿನ ದೊಡ್ಡ ಸಮಸ್ಯೆ ಪರಿಹಾರವಾಗಲಿದೆ. ಜೆಜೆಎಂ ಪೈಪ್‌ಲೈನ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಗುತ್ತಿಗೆದಾರರಿಂದ ಆಗಿರುವ ಕಾಮಗಾರಿ ಲೋಪಗಳ ಬಗ್ಗೆ ಸಭೆಗಳಲ್ಲಿ ಚರ್ಚೆಯಾಗುತ್ತಿದ್ದು, ಸರಿಪಡಿಸುವಂತೆ ಇಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ. ಕುರ್ಕಾಲು ಅಣೆಕಟ್ಟೆಯಿಂದ ಕಾಪು ಪುರಸಭೆ ವ್ಯಾಪ್ತಿಗೆ ಪ್ರಾಯೋಗಿಕ ನೀರು ಪೂರೈಕೆ ಆರಂಭಿಸಲಾಗಿದೆ. ಅಣೆಕಟ್ಟೆ ವ್ಯಾಪ್ತಿಯಲ್ಲಿ ಬರುವ ನಾಲ್ಕು ಗ್ರಾಪಂಗಳಿಗೆ ನೀರು ಪೂರೈಸುವ ಯೋಜನೆ ಟೆಂಡರ್ ಹಂತದಲ್ಲಿದೆ. ಗುರ್ಮೆ ಸುರೇಶ್ ಶೆಟ್ಟಿ, ಕಾಪು ಶಾಸಕರು ವಾರಾಹಿ ನೀರು ಸರಬರಾಜು ಯೋಜನೆ ಪ್ರಗತಿಯಲ್ಲಿದ್ದು, ಕಾಪು ತಾಲೂಕಿನ ಜೆಜೆಎಂ ಕಾಮಗಾರಿ ಶೇ.80 ಪೂರ್ಣವಾಗಿದೆ. ಕೆಲವೆಡೆ ಇದ್ದ ತೊಡಕು ನಿವಾರಿಸಿ ಕಾಮಗಾರಿಗೆ ವೇಗ ನೀಡಲಾಗುತ್ತಿದೆ. ಅಂದುಕೊಂಡಂತೆ ಸಾಗಿದಲ್ಲಿ ಈ ವರ್ಷಾಂತ್ಯಕ್ಕೆ ಕಾಪುವಿಗೆ ವಾರಾಹಿ ನೀರು ಸರಬರಾಜಗಲಿದೆ. ವೆಂಕಟೇಶ್ ಮೂರ್ತಿ ಜೆಜೆಎಂ, ಮುಖ್ಯ ಇಂಜಿನಿಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net