ಘಾಟಿ ಸುಬ್ರಹ್ಮಣ್ಯ ಬಳಿ ಮದುವೆ ಬಸ್​ ಅಪಘಾತ: ಇಬ್ಬರ ಸಾವು, 15ಕ್ಕೂ ಹೆಚ್ಚು ಮಂದಿಗೆ ಗಾಯ

bus accident
Published on

ದೊಡ್ಡಬಳ್ಳಾಪುರ: ಶ್ರೀ ಘಾಟಿ ಸುಬ್ರಹ್ಮಣ್ಯ ಬಳಿ ಮದುವೆಯ ಆರತಕ್ಷತೆಗೆ ಬಂದಿದ್ದವರನ್ನ ಸ್ವಗ್ರಾಮಕ್ಕೆ ಕರೆದೊಯ್ಯುತ್ತಿದ್ದ ಬಸ್​ ಮಾರ್ಗಮಧ್ಯೆ ಪಲ್ಟಿಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ದುರ್ಘಟನೆಯಲ್ಲಿ ಬೆಳಚಿಕ್ಕನಹಳ್ಳಿ ನಿವಾಸಿ ರಾಮಕೃಷ್ಣ ರೆಡ್ಡಿ (55) ಮತ್ತು ಪಿ.ಎಸ್.ಕುಮಾರ್‌ (60) ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ದೊಡ್ಡಬಳ್ಳಾಪುರ ಹಾಗೂ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ತೊಂಡೇಬಾವಿ ಸಮೀಪದ ಬೆಳಚಿಕ್ಕನಹಳ್ಳಿಯವರ ಮದುವೆ ಘಾಟಿಯ ಖಾಸಗಿ ಕಲ್ಯಾಣಮಂಟಪದಲ್ಲಿ ಶನಿವಾರ ನಡೆದಿದೆ. ಅಂದು ರಾತ್ರಿ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೀಗಾಗಿ ಗ್ರಾಮದಿಂದ ಸಾಕಷ್ಟು ಮಂದಿ ಆರತಕ್ಷತೆಗೆ ಬಸ್​ನಲ್ಲಿ ಆಗಮಿಸಿದ್ದರು. ಆರತಕ್ಷತೆ ಮುಗಿದ ಬಳಿಕ ಗ್ರಾಮಸ್ಥರು ಮತ್ತು ಸಂಬಂಧಿಕರನ್ನು ವಾಪಸ್​ ಸ್ವಗ್ರಾಮಕ್ಕೆ ಬಸ್​ನಲ್ಲಿ ಕರೆದೊಯ್ಯಲಾಗುತ್ತಿತ್ತು. ಮಾರ್ಗಮಧ್ಯೆ ಚಾಲಕನ ನಿಯಂತ್ರಣ ತಪ್ಪಿದ ಬಸ್​ ಮಾಕಳಿ-ಘಾಟಿ ನಡುವಿನ ಹಳ್ಳಕ್ಕೆ ಬಿದ್ದಿದೆ.

ಈ ವೇಳೆ ಅದೇ ಮಾರ್ಗದಲ್ಲಿ ಬರುತ್ತಿದ್ದ ಸ್ಥಳೀಯ ಯುವಕರು ಆಂಬುಲೆನ್ಸ್‌ ಹಾಗೂ ಪೊಲೀಸರಿಗೆ ಮಾಹಿತಿ ನೀಡಿ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದರು. ಗಂಭೀರ ಗಾಯಗೊಂಡಿದ್ದ ರಾಮಕೃಷ್ಣರೆಡ್ಡಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟರೆ, ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಕುಮಾರ್‌ ಮೃತಪಟ್ಟಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net