

ಅಂತೋಣಿ ಪಿ.ವಿ. ಸಿದ್ದಾಪುರ
ಪ್ರತಿಯೊಂದು ಗ್ರಾಮಕ್ಕೂ ತನ್ನದೇ ಆದ ಇತಿಹಾಸವಿದ್ದು, ಕೆಲವು ಗ್ರಾಮದ ಹೆಸರೇ ಆ ಗ್ರಾಮದ ಇತಿಹಾಸ ಸೂಚಿಸುತ್ತದೆ.
ಅದರಂತೆ ಸಿದ್ದಾಪುರ ಸಮೀಪದ ಕೂಡುಗೆದ್ದ ಎಂಬ ಗ್ರಾಮವೂ ತನ್ನದೇ ಆದ ಇತಿಹಾಸ ಹೊಂದಿದೆ.
ಈ ಗ್ರಾಮದ ಹೆಸರಿನಲ್ಲಿಯೇ ಅದರ ಇತಿಹಾಸವೂ ಅಡಕವಾಗಿದೆ. ಶತಮಾನದ ಇತಿಹಾಸವಿರುವ ಈ ಕೂಡುಗದ್ದೆ ಗ್ರಾಮದಲ್ಲಿ ಅಂದು ನೆಲೆಸಿದ್ದ ಕೊಡವ ಜನಾಂಗದ ಕಲಿಯಂಡ ಕುಟುಂಬಸ್ಥರ ಹಿರಿಯರಾದ ಮಾದಪ್ಪ, ವ್ಯವಸಾಯಕ್ಕೆ ಯೋಗ್ಯವಾದ ಪ್ರದೇಶ ಗುರುತಿಸಿ ಹೊಲಗದ್ದೆ ನಿರ್ಮಿಸಲಾರಂಭಿಸಿದರು.
ಅದೇ ಕಾಲಕ್ಕೆ ಅವರಿದ್ದ ಜಾಗದ ವಿರುದ್ಧ ದಿಕ್ಕಿನಲ್ಲಿ ವಾಸವಿದ್ದ ತಿಪ್ಪೇಗೌಡ ಮನೆತನದ ಗೌಡ ಕುಟುಂಬಸ್ಥರು ಸಹ ಇತ್ತ ಕಡೆಯಿಂದ ವ್ಯವಸಾಯ ಮಾಡುತ್ತಾ ಭೂಮಿ ಹದಗೊಳಿಸುತ್ತಾ ಸಾಗಿದರು. ಆ ಕಡೆಯಿಂದ ಕಲಿಯಂಡ ಕುಟುಂಬಸ್ಥರು ಹಾಗೂ ಬದಿಯಿಂದ ಈ ಗೌಡ ಕುಟುಂಬಸ್ಥರು ವ್ಯವಸಾಯ ಮಾಡುತ್ತಾ ಸಾಗಿ, ಕೊನೆಗೆ ಎರಡೂ ಕಡೆಯವರ ಗದ್ದೆಗಳು ಕೂಡಿದ ಸ್ಥಳವನ್ನು ಕೂಡುಗದ್ದೆ ಎಂದು ಕರೆದರು.
ಅದೇ ಹೆಸರಿನಲ್ಲಿ ಗುರುತಿಸಿಕೊಳ್ಳಲಾರಂಭಿಸಿದ ಪ್ರದೇಶ ಮತ್ತೆ ಸರ್ಕಾರಿ ದಾಖಲೆಗಳಲ್ಲೂ ಸೇರ್ಪಡೆಗೊಂಡು ಇಂದು ಕೂಡುಗದ್ದೆ ಎಂಬ ಹೆಸರಿನಲ್ಲೇ ಚಾಲ್ತಿಯಲ್ಲಿದೆ.
ಕೊಡುಗದ್ದೆ ಗ್ರಾಮ ಕಾವೇರಿ ನದಿ ದಡದಲ್ಲಿದ್ದು, ಇಲ್ಲಿನ ಸುತ್ತ ಮುತ್ತ ಜಮೀನುಗಳಲ್ಲಿ ವರ್ಷ ಪೂರ್ತಿ ಬೇಸಾಯ ಮಾಡುವುದು ಗ್ರಾಮದ ವಿಶೇಷವಾಗಿದೆ. ಇಲ್ಲಿನ ಬಹುತೇಕ ಕೃಷಿ ಜಮೀನುಗಳಲ್ಲಿ ಭತ್ತದ ಪೈರು ಹಚ್ಚ ಹಸಿರಿನಿಂದ ಯಾವಾಗಲೂ ಕಂಗೊಳಿಸುವುದರಿಂದ ಕೊಡುಗದ್ದೆ ಗ್ರಾಮ ಭತ್ತಕ್ಕೆ ಪ್ರಸಿದ್ಧಿಯಾಗಿದೆ.
ಕೂಡುಗದ್ದೆ ಗ್ರಾಮದ ಒಟ್ಟು ವಿಸ್ತೀರ್ಣ 60 ಎಕರೆ, ಅದರಲ್ಲಿ ಸುಮಾರು 7ಎಕರೆಯಲ್ಲಿ ಭತ್ತದ ಗದ್ದೆಯಿದ್ದು ಇಲ್ಲಿ ಭತ್ತದ ಕೃಷಿ ಮಾಡುತ್ತಿದ್ದಾರೆ. ಪ್ರಾರಂಭದಲ್ಲಿದ್ದ ಒಂದು ಗೌಡ ಕುಟುಂಬ ಇದೀಗ 6 ಕುಟುಂಬಗಳನ್ನಾಗಿ ಮಾರ್ಪಟ್ಟಿದೆ ಅದಲ್ಲದೆ, ಹಿಂದು ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ 200ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದು ಎಲ್ಲರೂ ಅನ್ಯೋನ್ಯವಾಗಿ ಬದುಕು ಸಾಗಿಸುತ್ತಿದ್ದಾರೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕು, ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಒಂದನೇ ಮತ್ತು ಎರಡನೇ ವಿಭಾಗದಲ್ಲಿ ಗ್ರಾಮ ಸೇರ್ಪಡೆಗೊಂಡಿದೆ. ವಿರಾಜಪೇಟೆ ತಾಲೂಕು ಕೇಂದ್ರದಿಂದ ಕೂಡುಗದ್ದೆ 18 ಕಿ.ಮೀ ದೂರದಲ್ಲಿದೆ. ಸಿದ್ದಾಪುರ ಪಟ್ಟಣದಿಂದ ಗ್ರಾಮಕ್ಕೆ 2 ಕಿ.ಮೀ. ದೂರದಲಿದೆ.
ಕಾಫಿ, ಕರಿಮೆಣಸು, ಭತ್ತ, ಅಡಕೆ ಇಲ್ಲಿನ ಪ್ರಮುಖ ಬೆಳೆಗಳು. ಕನ್ನಡ, ಕೊಡವ, ಮಲಯಾಳಂ, ತಮಿಳು ಇಲ್ಲಿನ ಸ್ಥಳೀಯರು ಬಳಸುವ ಪ್ರಮುಖ ಭಾಷೆಗಳು.
ನದಿ ದಡದ ಪ್ರದೇಶಗಳಲ್ಲಿ ವಾಸ: 2018-2019ರಲ್ಲಿ ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಕಾವೇರಿ ನದಿ ತುಂಬಿ ಹರಿಯಿತು. ಇದರ ಪರಿಣಾಮ ಕೊಡುಗದ್ದೆ ಗ್ರಾಮದ ನದಿ ದಡದ ಪ್ರದೇಶಗಳಲ್ಲಿ ವಾಸವಿದ್ದ ಹಲವು ಮನೆಗಳು ನೆಲಸಮವಾಗಿದ್ದವು. ಸರ್ಕಾರ ನಿವೇಶನ ಹಾಗೂ ಸೂರು ನೀಡುವುದಾಗಿ ಭರವಸೆ ನೀಡಿ ಹಲವು ವರ್ಷಗಳು ಕಳೆದರೂ ಇಂದಿಗೂ ಕುಟುಂಬಗಳಿಗೆ ಶಾಶ್ವತ ಸೂರು ಲಭಿಸಿಲ್ಲ. ಇಂದಿಗೂ ಸಂಕಷ್ಟದಲ್ಲಿ ಜೀವನ ನಡೆಸುತ್ತಿದಾರೆ . ಗ್ರಾಮದಲ್ಲಿ ಮೂಲ ಸೌಕರ್ಯಗಳಿಲ್ಲ ನದಿ ದಡದಲ್ಲಿ ವಾಸವಾಗಿರುವ ನೂರಾರು ಕುಟುಂಬಗಳ ಗ್ರಾಮವನ್ನು ಅಭಿವೃದ್ಧಿಪಡಿಸುವಂತೆ ಹಲವು ವರ್ಷಗಳಿಂದಲೂ ಜಿಲ್ಲಾಡಳಿತಕ್ಕೆ ಒತ್ತಾಯಿಸಿ ನಿರಂತರ ಪ್ರತಿಭಟನೆ ಮಾಡಲಾಗುತ್ತಿದೆ. ಆದರೂ ಅಧಿಕಾರಿಗಳು ಗ್ರಾಮದತ್ತ ತಿರುಗಿ ನೋಡುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.