ಈ ಊರಲ್ಲಿ ಯಾರೂ ಚಪ್ಪಲಿ ಹಾಕಂಗಿಲ್ಲ, ವಾಹನ ಬಳಸುವಂತಿಲ್ಲ, ಬರಿಗಾಲಲ್ಲೇ ಓಡಾಡ್ಬೇಕು..! ಕಾರಣ ಇಲ್ಲಿದೆ

New Project
Published on

ವಿಜಯಪುರ: ಈ ಗ್ರಾಮಕ್ಕೆ ಸದ್ಯ ಭೇಟಿ ನೀಡುವ ಯಾರಿಗಾದರೂ ಅಚ್ಚರಿ ಆಗದೆ ಇರದು. ಈ ಊರಲ್ಲಿ ಎಲ್ಲರೂ ಬರಿಗಾಲಲ್ಲೇ ಓಡಾಡ್ತಿದ್ದಾರೆ, ಬೈಕ್‌- ಸೈಕಲ್‌ ಸೇರಿದಂತೆ ಯಾವ ವಾಹನ ಸಂಚಾರಕ್ಕೂ ಅವಕಾಶವಿಲ್ಲ. ಕಾಲಿಗೆ ಚಪ್ಪಲಿಯನ್ನೂ ಧರಿಸುತ್ತಿಲ್ಲ...

ಇದು ವಿಜಯಪುರದ ವಾರ್ಡ್​ ನಂ.30ರ ಕಾಲೇಬಾಗ್ ಗ್ರಾಮದ ಚಿತ್ರಣ. ಅರೇ, ಇದ್ಹೇನಿದು? ಈ ಊರಿನ ಜನರೇಕೆ ಚಪ್ಪಲಿ ಹಾಕುತ್ತಿಲ್ಲ, ವಾಹನವನ್ನೂ ಬಳಸುತ್ತಿಲ್ಲ ಎಂಬ ಪ್ರಶ್ನೆ ಮನದಲ್ಲಿ ಮೂಡೋದು ಸಹಜ. ಅದಕ್ಕೆ ಕಾರಣ 'ವ್ರತ'!

ಕಾಲೇಬಾಗ್ ಗ್ರಾಮದಲ್ಲಿ ಕೆಲ ದಿನಗಳಿಂದ ಅಪಘಾತ- ಅವಘಡಗಳು ಸಂಭವಿಸುತ್ತಲೇ ಇವೆ. ಯುವಕರು ಅಪಘಾತಕ್ಕೆ ತುತ್ತಾಗುತ್ತಿದ್ದಾರೆ. ಕೆಲವರು ಬೈಕ್ ಮೇಲಿಂದ ಬಿದ್ದು ಗಾಯಗೊಂಡಿದ್ದಾರೆ. ಇನ್ನೂ ಕೆಲವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ರೋಗ-ರುಜಿನ ಬಂದು ಆಸ್ಪತ್ರೆಗೆ ಅಲೆದಾಡುವಂತಾಗಿದೆ. ಸಾವುಗಳೂ ಸಂಭವಿಸುತ್ತಿವೆ.

ಇದರಿಂದ ಬೆಚ್ಚಿದ ಗ್ರಾಮಸ್ಥರು ಪುರೋಹಿತರನ್ನು ಸಂಪರ್ಕಿಸಿದ್ದರು. ಅವರು ಕಠಿಣ ವ್ರತ ಪಾಲಿಸುವಂತೆ ಸಲಹೆ ನೀಡಿದ್ದಾರೆ. ಹೀಗಾಗಿ ಗ್ರಾಮದೇವರಾದ ಜಟ್ಟಿಂಗೇಶ್ವರ ಹಾಗೂ ದುರ್ಗಾದೇವಿ ಹೆಸರಿನಲ್ಲಿ ಎಲ್ಲರೂ ವ್ರತ ಮಾಡತೊಡಗಿದ್ದಾರೆ.

ವ್ರತ ಏನೆಂದರೆ? ಐದು ವಾರ ಯಾರೂ ಚಪ್ಪಲಿ ಧರಿಸುವಂತಿಲ್ಲ. ವಾಹನಗಳನ್ನು ಓಡಿಸುವಂತಿಲ್ಲ. ಅದರಲ್ಲಿಯೂ ಎರಡು ವಾರವಂತೂ ಯಾರೂ ಈ ನಿಯಮ ಮುರಿಯುವಂತೆಯೇ ಇಲ್ಲ.

ಈ ಹಿಂದೆ ಅರ್ಚಕರು ನುಡಿದ ಮಾತುಗಳೆಲ್ಲವೂ ಸತ್ಯ ಆಗಿರುವುದರಿಂದ ನಾವು ಇದನ್ನೆಲ್ಲ ಪಾಲಿಸುತ್ತಿದ್ದೇವೆ ಎನ್ನುತ್ತಾರೆ ಕಾಲೇಬಾಗ್ ಗ್ರಾಮದ ಪರಶುರಾಮ ಪೂಜಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net