

ಧಾರವಾಡ: ವಿಜಯಪುರ ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾದ ಐಎಎಸ್ ಅಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರು ಅಧಿಕಾರ ಸ್ವೀಕರಿಸಲು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅಪಘಾತಕ್ಕೀಡಾಗಿದ್ದು, ಅಧಿಕಾರಿ ಸೇರಿ 7 ಮಂದಿ ಗಾಯಗೊಂಡಿದ್ದಾರೆ.
ವಿಜಯಮಹಾಂತೇಶ ಅವರು ಪತ್ನಿ ಶ್ವೇತಾ, ಮಕ್ಕಳಾದ ತನ್ವಿ, ವಿಹಾನ್, ಮಾವ ಗಂಗಾಧರ, ಸಂಬಂಧಿ ಪ್ರವಿಣಕುಮಾರ ಜತೆ ಮಂಗಳವಾರ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಚಾಲಕ ಬಸವರಾಜನ ನಿಯಂತ್ರಣ ತಪ್ಪಿದ ಕಾರು ಧಾರವಾಡ ತಾಲೂಕಿನ ಯರಿಕೊಪ್ಪ ಬಳಿಯ ಬೈಪಾಸ್ನಲ್ಲಿ ಪಲ್ಟಿಯಾಗಿದ್ದು, ಘಟನೆಯಲ್ಲಿ ಡಿಸಿ ಸೇರಿ 7 ಮಂದಿ ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಹಿಂದೆ ದಾವಣಗೆರೆ ಜಿಪಂ ಸಿಇಒ ಆಗಿದ್ದ ವಿಜಯಮಹಾಂತೇಶ ದಾನಮ್ಮನವರ ಅವರನ್ನು ವಿಜಯಪುರ ಜಿಲ್ಲಾಧಿಕಾರಿಯಾಗಿ ವರ್ಗ ಮಾಡಿ ಸೋಮವಾರವಷ್ಟೇ ಆದೇಶಿಸಲಾಗಿತ್ತು. ಹೀಗಾಗಿ ಅಧಿಕಾರ ವಹಿಸಿಕೊಳ್ಳಲು ದಾವಣಗೆರೆಯಿಂದ ವಿಜಯಪುರಕ್ಕೆ ಹೊರಟಿದ್ದರು.
ಎದುರಿನಿಂದ ಬಂದ ವಾಹನ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಗ್ರಾಮೀಣ ಸಿಪಿಐ ಮಂಜುನಾಥ ಕುಸುಗಲ್ಲ ಮತ್ತು ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು.