

ಬೆಂಗಳೂರು: ಕಾಂಗ್ರೆಸ್ ಪ್ರತಿಭಟನೆ ನಿಲ್ಲಿಸದ ಕಾರಣ ವಿಧಾನಸಭೆ ಕಲಾಪವನ್ನು ಮಾ.4ಕ್ಕೆ ಮುಂದೂಡಲಾಗಿದೆ.
ಅಧಿವೇಶನದ ಆರಂಭದಿಂದಲೂ ಸಚಿವ ಈಶ್ವರಪ್ಪರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಶಾಸಕರು ವಿಧಾನಸೌಧಲ್ಲಿ ಅಹೊರಾತ್ರಿ ಧರಣಿ ನಡೆಸುತ್ತಲೇ ಇದ್ದರು. ಮಂಗಳವಾರ ಬೆಳಗ್ಗೆಯೂ ಗದ್ದಲ ನಡೆಯುತ್ತಲೇ ಇತ್ತು. ಸಿಎಂ ಬಸವರಾಜ ಬೊಮ್ಮಾಯಿ, ಮತ್ತು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಎಷ್ಟೇ ಮನವಿ ಮಾಡಿದರೂ ಪ್ರತಿಪಕ್ಷ ಕಾಂಗ್ರೆಸ್ ಸ್ಪಂದಿಸಲಿಲ್ಲ. ಚರ್ಚೆಯಲ್ಲಿ ಭಾಗವಹಿಸಲು ಜೆಡಿಎಸ್ ಆಸಕ್ತಿ ತೋರಿಸಿತ್ತಾದರೂ ಕಾಂಗ್ರೆಸ್ ಪ್ರತಿಭಟನೆ ನಿಲ್ಲದ ಕಾರಣ ಸ್ಪೀಕರ್ ಕಲಾಪ ಮುಂದೂಡಿದರು.
ಸುಸೂತ್ರವಾಗಿ ಕಲಾಪ ನಡೆಯಲು ಸ್ಪೀಕರ್ ತಮ್ಮ ಅಧಿಕಾರ ಬಳಸಬೇಕು ಎಂದು ಜೆಡಿಎಸ್ ಕೋರಿತು. ಸಿಎಂ ಪದೇಪದೆ ಮನವಿ ಮಾಡಿದರೂ ಕಾಂಗ್ರೆಸ್ ಸದಸ್ಯರ ಧರಣಿ, ಘೋಷಣೆ ಮಾತ್ರ ನಿಲ್ಲಲಿಲ್ಲ. ಅಂತಿಮವಾಗಿ ಮುಂದಿನ ನಿರ್ಧಾರ ಕೈಗೊಳ್ಳಲು ಸ್ಪೀಕರ್ ವಿವೇಚನೆಗೆ ಸಿಎಂ ಬೊಮ್ಮಾಯಿ ಬಿಟ್ಟರು.
ನಿರಂತರ ಮನವಿಗೂ ಪ್ರತಿಪಕ್ಷ ಕಾಂಗ್ರೆಸ್ ಸ್ಪಂದಿಸಲಿಲ್ಲ. ಹೀಗಾಗಿ ಸದನ ಮುಂದೂಡುವುದು ಅನಿವಾರ್ಯವಾಗಿದೆ ಎಂದ ಸ್ಪೀಕರ್, ಮಾ.4ಕ್ಕೆ ಸದನ ಮುಂದೂಡಿರುವುದಾಗಿ ಪ್ರಕಟಿಸಿದರು.