

ಬೆಳಗಾವಿ: ವಿಧಾನ ಪರಿಷತ್ನ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಗೆಲುವು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆ ಬಾಕಿ ಇದೆ. 7501 ಮತಗಳನ್ನು ಪಡೆಯುವ ಮೂಲಕ ಮೊದಲ ಪ್ರಾಶಸ್ತ್ಯದಲ್ಲೇ ಗೆಲುವಿನ ನಗೆ ಬೀರಿದ ಬಸವರಾಜ ಹೊರಟ್ಟಿ, ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ 8ನೇ ಬಾರಿಗೆ ಗೆಲ್ಲುವ ಮೂಲಕ ದೇಶದ ರಾಜಕೀಯ ಇತಿಹಾಸದಲ್ಲಿಯೇ ದಾಖಲೆ ನಿರ್ಮಿಸಿದ್ದೇನೆ ಎಂದರು.
ಬೆಳಗಾವಿ ನಗರದ ಜ್ಯೋತಿ ಪಿಯು ಕಾಲೇಜಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೊರಟ್ಟಿ, 1980ರಿಂದ 2022 ರವರೆಗೆ ನಿರಂತರವಾಗಿ ಗೆಲುವು ಸಾಧಿಸಿದ್ದೇನೆ. ರಾಜಕೀಯದಲ್ಲಿ ಇತಿಹಾಸದಲ್ಲಿ ಸತತವಾಗಿ 8 ಬಾರಿ ಗೆದ್ದಿಲ್ಲ. ಈ ಗೆಲುವು ಶಿಕ್ಷಕರದ್ದು ಎಂದರು.
ಈ ಬಾರಿ ಚುನಾವಣೆಯಲ್ಲಿ 8 ರಿಂದ 10 ಸಾವಿರ ಮತಗಳ ಬರುವ ನಿರೀಕ್ಷೆಯಿಟ್ಟುಕೊಳ್ಳಲಾಗಿತ್ತು. ಇದೀಗ 7 ಸಾವಿರ ಮತ ಪಡೆಯುವ ಮೂಲಕ ಗೆಲುವು ಸಾಧಿಸಿದ್ದೇನೆ. ಇನ್ನೂ 2 ಸಾವಿರ ಮತಗಳು ಬರುವ ನಿರೀಕ್ಷೆಯಿದೆ ಎಂದರು.
ಚುನಾವಣೆಯಲ್ಲಿ ಚಲಾಯಿಸಿದ ಮತಗಳಲ್ಲಿ ಶೇ.50 ಮತ ಪಡೆದುಕೊಂಡವರು ಗೆಲುವು ಸಾಧಿಸಲಿದ್ದಾರೆ. ಈಗಾಗಲೇ ನಾನು 15 ಸಾವಿರ ಮತಗಳ ಪೈಕಿ 7500 ಮತಗಳನ್ನು ಪಡೆದು ಗೆದ್ದಿದ್ದೇನೆ ಎಂದರು.