ನನಗೆ 3 ವೋಟು, ಸತ್ಯಹರಿಶ್ಚಂದ್ರನಿಗೆ 2 ವೋಟು! ಎಂಎಲ್​ಸಿ ಚುನಾವಣೆ ಕುರಿತು ವಾಟಾಳ್​ ನಾಗರಾಜ್​ ಮಾರ್ಮಿಕ ನುಡಿ

Vatal Nagaraj 26 Jan 20
Published on

ಮೈಸೂರು: ಮೈಸೂರು-ಚಾಮರಾಜನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್​ ಚುನಾವಣೆಗೆ ಸ್ಪರ್ಧಿಸಿದ್ದ ನನಗೆ 3 ವೋಟು ಬಂದಿವೆ. ಒಂದು ವೇಳೆ ಸತ್ಯಹರಿಶ್ಚಂದ್ರ ಬಂದು ಚುನಾವಣೆಗೆ ನಿಂತಿದ್ದರೆ 2 ವೋಟು ಬರುತ್ತಿದ್ದವು ಎಂದು ಕನ್ನಡ ಚಳವಳಿ ವಾಟಾಳ್​ ಪಕ್ಷದ ಅಧ್ಯಕ್ಷ ವಾಟಾಳ್​ ನಾಗರಾಜ್​ ಮಾರ್ಮಿಕವಾಗಿ ನುಡಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್​ ನಾಗರಾಜ್​, ಸತ್ಯವಂತರಿಗೆ ಇದು ಕಾಲವಲ್ಲ. ನಾನು ದುಡ್ಡು ಕೊಟ್ಟು ಮತ ಹಾಕಿಸಿಕೊಳ್ಳುವ ರಾಜಕಾರಣ ಮಾಡಲಿಲ್ಲ ಎಂದರು.

ಮತದಾರರು ವಿಶ್ವಾಸದಿಂದ ಗೆಲ್ಲಿಸಿಕೊಳ್ಳುವ ಭರವಸೆ ನೀಡಿದ್ದರು. ಆದರೆ, ನಾನು ದುಡ್ಡು ಕೊಡಲಿಲ್ಲ. 12 ಕೋಟಿ ರೂ. ಖರ್ಚು ಮಾಡಿ ಮೇಲ್ಮನೆಗೆ ಹೋಗಿ ಏನು ಮಾಡೋದು? ಜನಪರವಾಗಿ ಹೋರಾಟ ಮಾಡುವವರು ಮತದಾರರಿಗೆ ಬೇಡ ಎನ್ನಿಸಿದರೆ ನಾವೇನೂ ಮಾಡಲಾಗದು. ರೌಡಿಗಳು, ಲೂಟಿಕೋರರು, ಕೊಲೆಗಡುಕರು, ರಿಯಲ್​ ಎಸ್ಟೇಟ್​ನವರಿಗೆ ಮತದಾರರು ಮನ್ನಣೆ ಕೊಡುತ್ತಿದ್ದಾರೆ. ಆದ್ದರಿಂದ ನನಗೆ ಬಂದಿರುವ 3 ವೋಟುಗಳು 100 ವೋಟಿಗೆ ಸಮವೆಂದು ಭಾವಿಸಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net