ಹಬ್ಬದ ದಿನ ವರಮಹಾಲಕ್ಷ್ಮೀಗೆ ಹಾಕಿದ್ದ ಚಿನ್ನಾಭರಣವನ್ನೇ ಕದ್ದ ಖದೀಮರು!

varamahalakshmi
Published on

ಬೆಂಗಳೂರು: ವರಮಹಾಲಕ್ಷ್ಮೀ ಹಬ್ಬದ ದಿನದಂದು ದೇವರಿಗೆ ಹಾಕಿದ್ದ ಬಂಗಾರವನ್ನೇ ಖದೀಮರು ದೋಚಿರುವ ಘಟನೆ ಮಹಾಲಕ್ಷ್ಮಿಲೇಔಟ್ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸತ್ಯನಾರಾಯಣ್ ಲೇಔಟ್​ನ ಮೋಹನ ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ. ಶುಕ್ರವಾರ ಹಬ್ಬದ ಹಿನ್ನೆಲೆ ಮೋಹನ್​ರ ಮನೆಯಲ್ಲಿ ಕಿಟಕಿ ಬಳಿ ವರಮಹಾಲಕ್ಷ್ಮೀಯನ್ನು ಪ್ರತಿಷ್ಠಾಪಿಸಲಾಗಿತ್ತು. ದೇವರಿಗೆ ಚಿನ್ನಾಭರಣ ಮತ್ತು ಹೂವಿನಿಂದ ಅಲಂಕರಿಸಿ ಪೂಜೆ ಸಲ್ಲಿಸಿದ್ದರು.

ಅಂದು ರಾತ್ರಿ ಮನೆಯವರು ಮಲಗಿರೋ ವೇಳೆ ಯಾರೋ ಖತರ್ನಾಕ್​ ಕಳ್ಳರು ಕಿಟಕಿ ಮೂಲಕ ಕೋಲು ಬಳಸಿ ದೇವರ ಮೈಮೇಲಿದ್ದ ಬಂಗಾರವನ್ನು ಹೊರಗೆ ಎಳೆದುಕೊಂಡು ಪರಾರಿಯಾಗಿದ್ದಾರೆ. ಸುಮಾರು 200 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿರುವ ಪೊಲೀಸರು, ಸಮೀಪದ ಸಿಸಿಟಿವಿಗಳನ್ನೂ ಪರಿಶೀಲನೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net