ದೂರುದಾರನಿಗೆ ತನ್ನ ಕಾರನ್ನೇ ಕೊಟ್ಟು PSIಗೆ ಬೆವರಿಳಿಸಿ ಭಾರೀ ಸುದ್ದಿಯಾಗಿದ್ದ ತುಮಕೂರು SPಗೆ ಆತ್ಮಹತ್ಯೆ ಬೆದರಿಕೆ!

tumkur sp rahul kumar
Published on

ತುಮಕೂರು: ಆರೋಪಿಯನ್ನ ಬಂಧಿಸಲು ದೂರುದಾರನಿಗೆ ತನ್ನ ಕಾರನ್ನೇ ಕೊಟ್ಟು ತುರುವೇಕರೆ ತಾಲೂಕಿನ ದಂಡಿನಶಿವರ ಠಾಣೆ ಪಿಎಸ್​ಐ ಶಿವಲಿಂಗಯ್ಯಗೆ ತುಮಕೂರು ಎಸ್​ಪಿ ರಾಹುಲ್​ಕುಮಾರ್​ ಚಳಿ ಬಿಡಿಸಿದ್ದ ಪ್ರಕರಣ ಇಡೀ ರಾಜ್ಯಾದ್ಯಂತ ಭಾರೀ ಸದ್ದು ಮಾಡಿತ್ತು. ಆರೋಪಿ ಪರ ಸಾಥ್​ ಕೊಡುತ್ತಿದ್ದ ಪಿಎಸ್​ಐಗೆ ಕರ್ತವ್ಯದ ಮೂಲಕವೇ ಚಾಟಿ ಬೀಸಿದ್ದ ಎಸ್​ಪಿಗೆ ಸಾರ್ವಜನಿಕರಿಂದ ಪ್ರಶಂಸೆಯ ಮಹಾಪೂರವೇ ಹರಿದು ಬಂದಿತ್ತು. ಖುದ್ದು ಗೃಹ ಸಚಿವರೇ ಎಸ್​ಪಿ ಕಾರ್ಯಕ್ಕೆ ಪ್ರಂಶಸೆ ಸೂಚಿಸಿದ್ದರು. ಇಂತಹ ಎಸ್​ಪಿ ವಿರುದ್ಧ ಇದೀಗ ವ್ಯಕ್ತಿಯೊಬ್ಬರು ಕಿರುಕುಳ ಆರೋಪ ಹೊರಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಘಟನೆ ಸಂಭವಿಸಿದೆ.

ಪ್ರಕರಣವೊಂದರಲ್ಲಿ ನ್ಯಾಯ ಕೊಡಿಸದೆ ಕಿರುಕುಳ ನೀಡುತ್ತಿದ್ದಾರೆ ಎಂದು ತುಮಕೂರು ಜಿಲ್ಲಾ ಪೊಲೀಸ್​ ಅಧೀಕ್ಷಕ ರಾಹುಲ್​ಕುಮಾರ್​ ವಿರುದ್ಧ ದೂರಿರುವ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಾಧ್ಯಮಗಳಿಗೆ ವಿಡಿಯೋ ಬಿಡುಗಡೆ ಮಾಡಿದ್ದು, ಎಸ್​ಪಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದ್ದಾನೆ.

ರಿಯಲ್​ ಎಸ್ಟೇಟ್​ ದಾವೆಗೆ ಸಂಬಂಧಿಸಿದಂತೆ ಹೈಕೋರ್ಟ್​ನಲ್ಲಿ ಜಾಮೀನು ಪಡೆದಿದ್ದ ಆರೋಪಿ ಬಿಡುಗಡೆ ಪ್ರಕ್ರಿಯೆ ಪೂರ್ಣಗೊಳಿಸಲು ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣದಲ್ಲಿ ಐಜಿಪಿಗೆ ಆಡಿಯೋ ಸಾಕ್ಷಿ ಸಮೇತ ದೂರು ನೀಡಿ ಸ್ಥಳೀಯ ಅಧಿಕಾರಿ ಅಮಾನತಿಗೆ ಕಾರಣನಾಗಿದ್ದ. ಈ ಹಿನ್ನೆಲೆಯಲ್ಲಿ ದೂರುದಾರನ ವಿರುದ್ಧ ಲೈಂಗಿಕ ದೌರ್ಜನ್ಯ, ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಪ್ರಕರಣವನ್ನು ಉದ್ದೇಶಪೂರ್ವಕವಾಗಿ ದಾಖಲಿಸಿದ್ದರು ಎಂದು ಸಾಕಷ್ಟು ದಿನಗಳಿಂದಲೂ ಮಾಧ್ಯಮಗಳ ಮುಂದೆ ಈ ವ್ಯಕ್ತಿ ಆರೋಪಿಸಿದ್ದ. ಜತೆಗೆ ನ್ಯಾಯಾಲಯದಲ್ಲಿಯೂ ಈ ಬಗ್ಗೆ ಹೋರಾಟ ನಡೆಸುತ್ತಿದ್ದ ಎನ್ನಲಾಗಿದೆ.

ಸಚಿವ ಕೆ.ಎಸ್​.ಈಶ್ವರಪ್ಪರ ಹೆಸರನ್ನು ಡೆತ್​ನೋಟ್​ನಲ್ಲಿ ಉಲ್ಲೇಖಿಸಿ ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ ಸಂತೋಷ್​ ಪಾಟೀಲ್​ ಪ್ರಕರಣದ ಮಾದರಿಯಲ್ಲಿ ಬೆದರಿಸುವ ವಿಡಿಯೋ ಹೆಚ್ಚಾಗುತ್ತಿರುವುದು ಆತಂಕ ಹುಟ್ಟಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net