ದೂರುದಾರನಿಗೆ ತನ್ನ ಕಾರನ್ನೇ ಕೊಟ್ಟು PSIಗೆ ಮಾತಲ್ಲೇ ಚಾಟಿ ಬೀಸಿದ್ದ ತುಮಕೂರು SP: ಬೆಳಗಾಗುವಷ್ಟರಲ್ಲಿ ಆರೋಪಿ ಅಂದರ್​

tumkur sp
Published on

ತುರುವೇಕೆರೆ: ಆರೋಪಿಯನ್ನ ಹಿಡಿಯಲು ದೂರುದಾರನಿಗೆ ತುಮಕೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ತನ್ನ ಕಾರನ್ನೇ ಕೊಟ್ಟು ಕಳುಹಿಸಿದ್ದ ಪ್ರಕರಣ ಎಲ್ಲೆಡೆ ಚರ್ಚೆಯಾಗುತ್ತಿದ್ದು, ಕೊನೆಗೂ ಆರೋಪಿಯ ಬಂಧನವಾಗಿದೆ. ಕಾರು ವಾಪಸ್​ ಎಸ್​ಪಿ ಕಚೇರಿಗೆ ಬಂದಿದೆ. ಆರೋಪಿ ಪರ ಸಾಥ್​ ಕೊಡುತ್ತಿದ್ದ ಪಿಎಸ್​ಐಗೆ ಕರ್ತವ್ಯದ ಮೂಲಕವೇ ಚಾಟಿ ಬೀಸಿದ ಎಸ್​ಪಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಹೌದು, ಮೂರ್ನಾಲ್ಕು ತಿಂಗಳ ಹಿಂದೆ ದೂರು ದಾಖಲಾಗಿದ್ದರೂ ಆ ಪೊಲೀಸ್​ ಠಾಣೆ ಪಿಎಸ್​ಐ ಮಾತ್ರ ಆರೋಪಿಯನ್ನ ಬಂಧಿಸಿರಲಿಲ್ಲ. ದೂರುದಾರರು ನಿತ್ಯ ಠಾಣೆಗೆ ಅಲೆದು ಅಲೆದು ಸಾಕಾಗಿತ್ತು. ಸರ್​ ಆರೋಪಿ ಅಲ್ಲೇ ಇದ್ದಾನೆ ಬನ್ನಿ ಅರೆಸ್ಟ್​ ಮಾಡಿ ಅಂದ್ರೆ ‘ಆರೋಪಿಯನ್ನು ಕರೆತರಲು ಬಾಡಿಗೆ ಕಾರು ತನ್ನಿ’ ಎಂದು ಸೂಚಿಸಿದ್ದ ದಂಡಿನಶಿವರ ಠಾಣೆ ಪಿಎಸ್​ಐ ಶಿವಲಿಂಗಯ್ಯಗೆ ಎಸ್​ಪಿ ರಾಹುಲ್​ಕುಮಾರ್​ ನಿನ್ನೆ(ಗುರುವಾರ) ಕೊಟ್ಟ ಶಾಕ್​ ಅಷ್ಟಿಷ್ಟಲ್ಲ.

2021ರ ಆಗಸ್ಟ್​ 28ರಂದು ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ದಂಡಿನಶಿವರ ಠಾಣಾ ವ್ಯಾಪ್ತಿಯ ಕೋಡಿಹಳ್ಳಿಯಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಾಗೇಂದ್ರಪ್ಪ ಹಾಗೂ ಪಕ್ಕದ ಮನೆಯ ಶಿವಪ್ರಕಾಶ್​ ಮತ್ತು ಪ್ರಕಾಶ್​ರ ಮಗ ಚಂದನ್​ ನಡುವೆ ಜಗಳವಾಗಿತ್ತು. ಆ ವೇಳೆ ನಾಗೇಂದ್ರಪ್ಪ ಹಾಗೂ ಪತ್ನಿ ಶಿವಮ್ಮಗೆ ಚಂದನ ಮತ್ತು ಶಿವಪ್ರಕಾಶ್ ಹಿಗ್ಗಾಮುಗ್ಗಾ ಹಲ್ಲೆಗೈದಿದ್ದರಂತೆ. ನಾಗೇಂದ್ರಪ್ಪ ಮತ್ತು ಶಿವಮ್ಮಗೆ ಗಂಭೀರ ಗಾಯಗಳಾಗಿ ತುರುವೇಕೆರೆ ಆಸ್ಪತ್ರೆ ಹಾಗೂ ತುಮಕೂರಿನ ಖಾಸಗಿ ಆಸ್ಪತ್ರೆ ಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ವೈದ್ಯರು ಇದು ಮಾರಣಾಂತಿಕ ಹಲ್ಲೆ ಅಂತಾ ವರದಿ ನೀಡಿದ್ದಾರೆ. ಇದನ್ನ ಪಡೆದ ನಾಗೇಂದ್ರಪ್ಪ ದಂಡಿನಶಿವರ ಪೊಲೀಸ್ ಠಾಣೆಗೆ 307 ಕೊಲೆ ಪ್ರಯತ್ನ ಕೇಸ್ ನೀಡಿದ್ದರು.

ಆರೋಪಿಗಳನ್ನು ಬಂಧಿಸದೆ ಪಿಎಸ್​ಐ ನಿರ್ಲಕ್ಷ್ಯ ವಹಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಪ್ರಕಾಶ್​ಗೆ ಜಾಮೀನು ದೊರೆತಿದ್ದು, ಚಂದನ್​ ತಲೆಮರೆಸಿಕೊಂಡಿದ್ದ. ಹೀಗಾಗಿ ಆರೋಪಿ ಚಂದನ್​ನನ್ನು ಬಂಧಿಸುವಂತೆ ದೂರುದಾರ ನಾಗೇಂದ್ರಪ್ಪ ಠಾಣೆಗೆ ಬಂದು ಪಿಎಸ್​ಐ ಬಳಿ ಮನವಿ ಮಾಡಿಕೊಂಡಾಗ, ಆರೋಪಿಯನ್ನು ಬಂಧಿಸೋಣ…. ಅದಕ್ಕಾಗಿ ನೀನೊಂದು ಬಾಡಿಗೆ ವಾಹನ ಮಾಡಿಕೊಂಡು ಬಾ ಎಂದು ಪಿಎಸ್​ಐ ಶಿವಲಿಂಗಯ್ಯ ಹೇಳಿದ್ದರು ಎನ್ನಲಾಗಿದೆ.

ತನಿಖೆಗೆ ಆಗ್ರಹಿಸಿ ಪದೇಪದೆ ಠಾಣೆಗೆ ಭೇಟಿ ನೀಡುತ್ತಿದ್ದ ನಾಗೇಂದ್ರಪ್ಪ ಪಿಎಸ್​ಐ ವರ್ತನೆಗೆ ರೋಸಿಹೋಗಿ ಗುರುವಾರ ತುಮಕೂರಿಗೆ ಬಂದು ಜಿಲ್ಲಾ ಪೊಲೀಸ್​ ಅಧೀಕ್ಷಕ ರಾಹುಲ್​ಕುಮಾರ್​ ಅವರನ್ನು ಭೇಟಿಯಾಗಿ ಕಣ್ಣೀರಿಟ್ಟಿದ್ದರು. ಪಿಎಸ್​ಐ ವರ್ತನೆಗೆ ಕೆಂಡಾಮಂಡಲರಾದ ಎಸ್​ಪಿ, ಸ್ವತಃ ತಮ್ಮ ಕಾರಿನಲ್ಲೇ ನಾಗೇಂದ್ರಪ್ಪ ಮತ್ತು ಅವರ ಕಡೆಯವರನ್ನ ಕುಳಿತುಕೊಳ್ಳುವಂತೆ ಹೇಳಿ, ತಮ್ಮ ಕಾರು ಚಾಲಕನಿಗೆ ಕರೆದು ಇವರನ್ನು ಸೀದಾ ದಂಡಿನಶಿವರ ಪೊಲೀಸ್ ಠಾಣೆಗೆ ಬಿಟ್ಟು ಬಾ ಎಂದಿದ್ದಾರೆ. ಕಾರು ಬಂದಿದೆ ಆರೋಪಿಯನ್ನು ಬಂಧಿಸುವಂತೆ ಪಿಎಸ್​ಐ ಅವರನ್ನ ಕೇಳಿ ಎಂದು ನಾಗೇಂದ್ರಪ್ಪಗೆ ಹೇಳಿ ಕಳುಹಿಸಿದ್ದರು.

ಪೊಲೀಸ್​ ಠಾಣೆ ಮುಂದೆ ಸಾಹೇಬರ ಕಾರು ಕಂಡೊಡನೆ ದಂಗಾದ ದಂಡಿನಶಿವರ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿ ನಿಂತಲ್ಲಿಯೇ ಬೆವತು ಹೋಗಿದ್ದಾರೆ. ಅಷ್ಟೇ ಅಲ್ಲ, ದಂಡಿನಶಿವರ ಪಿಎಸ್​ಐ ಶಿವಲಿಂಗಯ್ಯಗೆ ದೂರವಾಣಿ ಕರೆ ಮಾಡಿದ ಎಸ್​ಪಿ ರಾಹುಲ್, ಆರೋಪಿ ಎಲ್ಲೇ ಇದ್ದರೂ ನಾಳೆ ಬೆಳಗಾಗುವಷ್ಟರಲ್ಲಿ ಬಂಧಿಸಬೇಕು ಎಂದು ಖಡಕ್​ ವಾರ್ನಿಂಗ್​ ಮಾಡಿದ್ದರು. ಇದಾದ ಮರುದಿನವೇ ಅಂದ್ರೆ ಇವತ್ತು(ಶುಕ್ರವಾರ) ಆರೋಪಿಯನ್ನು ಬಂಧಿಸಲಾಗಿದೆ. ಎಸ್​ಪಿ ಅವರ ಕರ್ತವ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net