ಗೃಹ‌ ಸಚಿವರಿಗೆ ವ್ಯಂಗ್ಯವಾಡಿದ ಜೆಡಿಎಸ್ ಶಾಸಕ ಗೌರಿಶಂಕರ್! ಪೊಲೀಸರ ವಿರುದ್ಧವೂ ಆಕ್ರೋಶ

gowrishankar jds
Published on

ತುಮಕೂರು: ಜಿಲ್ಲೆ ಬಗ್ಗೆ ಅರಿವಿಲ್ಲದವರಿಗೆ ಉಸ್ತುವಾರಿ ಮಾಡಿದ ಸರ್ಕಾರಕ್ಕೆ ಧನ್ಯವಾದ ಎಂದು ಗೃಹ‌ ಸಚಿವ ಅರಗ ಜ್ಞಾನೇಂದ್ರ ಕುರಿತು ಜೆಡಿಎಸ್ ಶಾಸಕ ಗೌರಿಶಂಕರ್ ವ್ಯಂಗ್ಯವಾಡಿದ್ದಾರೆ.

2021ರ ಆಗಸ್ಟ್​ನಲ್ಲಿ ಹಿರೇಹಳ್ಳಿ ಗ್ರಾಮದಲ್ಲಿ ಮಹಿಳೆ ಮೇಲೆ ಅತ್ಯಾಚಾರ- ಕೊಲೆ ನಡೆದಿತ್ತು. ಈ ಗ್ರಾಮ ರಾಷ್ಟ್ರೀಯ ಹೆದ್ದಾರಿ ಬಳಿಯೇ ಇದೆ. ಮುಖ್ಯಮಂತ್ರಿ, ಮಂತ್ರಿಗಳು ಡೈಲಿ ಓಡಾಡುವ ಹೈವೆ ಇದು. ಆದರೂ ಗೃಹ ಸಚಿವರಿಗೆ ಈ ಗ್ರಾಮ ಗೊತ್ತಿಲ್ಲ. ಹಿರೇಹಳ್ಳಿ ಇರೋದು ಆಂಧ್ರ ಗಡಿಭಾಗದಲ್ಲಿ ಅಂತ ಗೃಹ ಸಚಿವರು ಹೇಳ್ತಾರೆ. ಅತ್ಯಾಚಾರವೆಸಗಿ ಕೊಲೆ ಮಾಡಿದ ದುಷ್ಕರ್ಮಿಗಳನ್ನ ಪೊಲೀಸರು ಇನ್ನೂ ಪತ್ತೆ ಹಚ್ಚಿಲ್ಲ. ಘಟನೆ ನಡೆದ ಸ್ಥಳವೇ ಗೃಹ ಸಚಿವರಿಗೆ ಗೊತ್ತಿಲ್ಲ. ಇಂಥವರನ್ನು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿದ ರಾಜ್ಯ ಸರ್ಕಾರಕ್ಕೆ ಧನ್ಯವಾದ ಎಂದು ಲೇವಡಿ ಮಾಡಿದರು.

ತುಮಕೂರು ಗ್ರಾಮಾಂತರದಲ್ಲಿ ಇಸ್ಪಿಟ್ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಇವೆಲ್ಲವೂ ಕ್ಯಾತಸಂದ್ರ ಸಿಪಿಐ ಚನ್ನೇಗೌಡರ ಕುಮ್ಮಕ್ಕಿನಿಂದ ನಡೆಯುತ್ತಿದೆ. ಕ್ಯಾತಸಂದ್ರ ಪೊಲೀಸರೇ ಇಸ್ಪಿಟ್ ದಂಧೆಗೆ ಇಳಿದಿದ್ದಾರೆ. ಪೊಲೀಸರ ಈ ದಂಧೆ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಆದರೆ ಸರ್ಕಾರದಿಂದ ಉತ್ತರ ಬಂದಿಲ್ಲ. ಇದರ ವಿರುದ್ಧ ಗೃಹ ಸಚಿವರ ಮೊದಲ ಕೆಡಿಪಿ ಸಭೆಯಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ಮಾಡುತ್ತೇವೆ ಎಂದು ಶಾಸಕ ಗೌರಿಶಂಕರ್ ಬುಧವಾರ ತುಮಕೂರಲ್ಲಿ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net