

ಮಂಗಳೂರು: ತೌಕ್ತೆ ಚಂಡಮಾರುತ ಹಿನ್ನೆಲೆ ಕಾರಾವಳಿ ಸೇರಿದಂತೆ ರಾಜ್ಯಾದ್ಯಂತ ಹಲವೆಡೆ ವರುಣನ ಅಬ್ಬರ ಜೋರಾಗಿದೆ.
ನಿನ್ನೆ(ಶುಕ್ರವಾರ) ಸಂಜೆಯಿಂದಲೇ ಅರಬ್ಬಿ ಸಮುದ್ರ ಅಬ್ಬರಿಸತೊಡಗಿದ್ದು, ಶನಿವಾರ ಮುಂಜಾನೆಯಿಂದ ಭಾರಿ ಮಳೆಯಾಗುತ್ತಿದೆ. ಕರಾವಳಿಗೆ ಸೀಮಿತವಾಗದೆ ದಕ್ಷಿಣ ಕನ್ನಡ ಜಿಲ್ಲೆಯ ಒಳಭಾಗದ ತಾಲೂಕುಗಲ್ಲಿ ಭಾರಿ ಮಳೆ ಸುರಿದಿದೆ. ಉತ್ತರಕನ್ನಡ ಜಿಲ್ಲೆ ಭಟ್ಕಳದ ಜಾಲಿಕೊಡಿಯಲ್ಲಿ ನೀರು ಪಾಲಾಗುತಿದ್ದ ಬೋಟನ್ನು ತರಲು ಹೋದ ಲಕ್ಷ್ಮಣ ಈರಪ್ಪ ನಾಯ್ಕ (60) ಮೃತಪಟ್ಟಿದ್ದಾರೆ.
ಮೀನುಗಾರರ ರಕ್ಷಣೆ: ಚಂಡಮಾರುತ ಇದೆ ಎಂಬ ಎಚ್ಚರಿಕೆ ನಡುವೆಯೂ ಮೀನುಗಾರಿಕೆಗೆ ತೆರಳಿ ಅಪಾಯಕ್ಕೆ ಸಿಲುಕಿದ್ದ ಮೂವರು ಕೇರಳ ಮೀನುಗಾರರನ್ನು ಕೋಸ್ಟ್ ಗಾರ್ಡ್ ಪಡೆ ರಕ್ಷಿಸಿದೆ. ಕೇರಳದ ಕಣ್ಣೂರು ಕಡಲ ತೀರದಿಂದ 10 ನಾಟಿಕಲ್ ಮೈಲ್ ದೂರದಲ್ಲಿ ಬೋಟ್ ಇಂಜಿನ್ ಫೇಲ್ ಆಗಿ ಆಳ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದರು. ಅವರನ್ನು ರಕ್ಷಿಸಲಾಗಿದೆ.
ಸಮುದ್ರಪಾಲಾದ ಸ್ಮಶಾನ: ಮಂಗಳೂರು ಹೊರವಲಯದ ಸೋಮೇಶ್ವರ ಕಡಲ ತೀರ ಚಂಡಮಾರುತ ಪರಿಣಾಮ ಪ್ರಕ್ಷುಬ್ಧಗೊಂಡಿದೆ. ಏಕಾಏಕಿ ರಕ್ಕಸ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿತ್ತಿದ್ದು, ಅಲೆಗಳ ಅಬ್ಬರಕ್ಕೆ ಹಿಂದೂ ರುದ್ರಭೂಮಿ ಸಮುದ್ರಪಾಲಾಗಿದೆ. ಅಲೆಗಳ ಅಬ್ಬರಕ್ಕೆ ಸ್ಮಶಾನದ ತಡೆಗೋಡೆ ನಿನ್ನೆ ಕುಸಿದಿತ್ತು.
ಅಬ್ಬರಿಸುತ್ತಿದೆ ಕಡಲ ಅಲೆ: ಉಡುಪಿ ಜಿಲ್ಲೆಯಾದ್ಯಂತ ಗಾಳಿ ಸಹಿತ ಮಳೆಯಾಗುತ್ತಿದೆ. ಮಲ್ಪೆ ಮತ್ತು ಪಡುಕರೆಯಲ್ಲಿ ಕಡಲಿನ ಅಲೆಗಳು ಅಬ್ಬರಿಸುತ್ತಿವೆ. ಮೀನುಗಾರಿಕಾ ರಸ್ತೆಗಳು ಕಡಲ್ಕೊರೆತಕ್ಕೆ ಕೊಚ್ಚಿ ಹೋಗುವ ಸಾಧ್ಯತೆ ಇದೆ. ಮಲ್ಪೆ ಮುಖ್ಯ ಪ್ರವಾಸಿ ಬೀಚ್ನಲ್ಲಿ ಕಡಲ್ಕೊರೆತದಿಂದಾಗಿ ಹಾನಿ ಉಂಟಾಗಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ದಾವಣಗೆರೆ, ಚಾಮರಾಜನಗರ, ಮೈಸೂರು, ತುಮಕೂರು, ಶಿವಮೊಗ್ಗ ಸೇರಿದಂತೆ ಹಲವೆಡೆ ಮಳೆಯಾಗುತ್ತಿದ್ದು, ಕೆಲವಡೆ ಮೋಡಮುಸುಕಿದ ವಾತಾವರಣದೊಂದಿಗೆ ತುಂತುರು ಮಳೆಯಾಗುತ್ತಿದೆ.