

ಯಳಂದೂರು: ಪಟ್ಟಣ ಪಂಚಾಯಿತಿ ಸದಸ್ಯರು, ಪೌರ ಕಾರ್ಮಿಕರು ಹಾಗೂ ನೌಕರರಿಗೆ ವಿಷನ್ ಫೌಂಡೇಷನ್ ಸಹಯೋಗದಲ್ಲಿ ಶುಕ್ರವಾರ ಪಟ್ಟಣ ಪಂಚಾಯಿತಿ ಕಚೇರಿ ಬಳಿ ಸಾಮರ್ಥ್ಯಾಭಿವೃದ್ಧಿ ಚಟುವಟಿಕೆಗಳ ಪ್ರವಾಸಕ್ಕೆ ಮುಖ್ಯಾಧಿಕಾರಿ ಎಂ.ಪಿ.ಮಹೇಶ್‌ಕುಮಾರ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಪಟ್ಟಣ ಪಂಚಾಯಿತಿ ಸದಸ್ಯರು, ನೌಕರರು ಹಾಗೂ ಪೌರ ಕಾರ್ಮಿಕರಿಗೆ ಘನತ್ಯಾಜ್ಯ ವಿಲೇವಾರಿ, ಪ್ಲಾಸ್ಟಿಕ್ ತ್ಯಾಜ್ಯ ಬದಲು ಕಾಗದದ ಬಳಕೆ, ಭೂಮಿಯಲ್ಲಿ ಕರಗುವ ವಸ್ತುಗಳಿಂದ ತಯಾರಿಸಿದ ಕೈಚೀಲಗಳು, ಪರಿಸರಕ್ಕೆ ತ್ಯಾಜ್ಯದಿಂದಾಗುವ ಅಡ್ಡಪರಿಣಾಮಗಳ ಬಗ್ಗೆ ಮಾಹಿತಿ ನೀಡಲು ವಿಷನ್ ಫೌಂಡೇಷನ್ ಸಹಯೋಗದೊಂದಿಗೆ 3 ದಿನಗಳ ಮಾಹಿತಿ ಶಿಕ್ಷಣ ಸಂವಹನ ಹಾಗೂ ಸಾಮರ್ಥ್ಯಾಭಿವೃದ್ಧಿ ಚಟುವಟಿಕೆಗಳ ಪ್ರವಾಸವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪಟ್ಟಣದಿಂದ ಹೊರಟು ಮೈಸೂರಿನಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕ, ಉಡುಪಿಯಲ್ಲಿರುವ ಘಟಕ ಹಾಗೂ ಕಾರವಾರದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕಗಳಿಗೆ ಕರೆದೊಯ್ದು ಇಲ್ಲಿ ತ್ಯಾಜ್ಯವನ್ನು ಹೇಗೆ ವಿಲೇವಾರಿ ಮಾಡಲಾಗುತ್ತದೆ. ಕಲುಷಿತ ನೀರಿನ ಸಂಸ್ಕರಣೆ, ಇದರ ಮರುಬಳಕೆ, ಪರಿಸರಕ್ಕೆ ಮಾರಕವಾಗದಂತೆ ಇದನ್ನು ಜಲಮೂಲಗಳಿಗೆ ಹೇಗೆ ಬಿಡುವುದು, ಇದಕ್ಕೆ ಬಳಸಿಕೊಂಡಿರುವ ವೈಜ್ಞಾನಿಕ ವಿಧಾನಗಳು, ಇದರ ಅನುಷ್ಠಾನಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುವುದು. ಅಲ್ಲದೆ ಇಲ್ಲಿರುವ ಘಟಕಗಳಿಂದ ನೈಜ ಚಿತ್ರಣವನ್ನು ಮೂಡಿಸಿ ನಮ್ಮ ಪಂಚಾಯಿತಿ, ಪಟ್ಟಣದಲ್ಲೂ ಇದನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿ ನೀಡಲು ಈ ಪ್ರವಾಸವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪಪಂ ಅಧ್ಯಕ್ಷೆ ಲಕ್ಷ್ಮೀಮಲ್ಲು, ಸದಸ್ಯರಾದ ಮಹೇಶ್, ವೈ.ಜಿ.ರಂಗನಾಥ, ಮಹದೇವ, ಮಂಜು, ಪ್ರಭಾವತಿ ರಾಜಶೇಖರ್, ಬಿ.ರವಿ, ಸುಶೀಲಾಪ್ರಕಾಶ್, ಶ್ರೀಕಂಠಸ್ವಾಮಿ ಆಹಾರ ನಿರೀಕ್ಷಕ ರಾಘವೇಂದ್ರ, ಪರಶಿವ, ಮಲ್ಲಿಕಾರ್ಜುನ ಸೇರಿದಂತೆ ಪಪಂನ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಇದ್ದರು.