

ಉಳ್ಳಾಲ: ಕಿನ್ಯ ಗ್ರಾಮದಲ್ಲಿ ಭಾರೀ ಮಳೆ, ಗಾಳಿಗೆ ಮನೆ ಮೇಲೆ ಮರವೊಂದು ಶನಿವಾರ ಸಂಜೆ ಬಿದ್ದಿದ್ದು, ಮನೆ ಯಜಮಾನ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಿನ್ಯ ಗ್ರಾಮದ ಉಕ್ಕುಡ ಮಜಲ್ ಕೆ.ಎಂ. ಅಬೂಸಾಲಿ ಎಂಬವರ ಮನೆ ಮೇಲೆ ಭಾರೀ ಗಾತ್ರದ ಮರ ಬಿದ್ದಿದ್ದು, ಮೇಲ್ಛಾವಣಿಗೆ ಹಾನಿಯಾಗಿದೆ. ಈ ಸಂದರ್ಭ ಕೋಣೆಯೊಳಗಿದ್ದ ಕೆ.ಎಂ.ಅಬೂಸಾಲಿ ಮೈಮೇಲೆ ಹಂಚುಗಳು ಬಿದ್ದು ಗಾಯಗೊಂಡಿದ್ದಾರೆ.
ಮನೆ ಭಾಗಶಃ ಜರಿದು ಬಿದ್ದು ಅಪಾರ ನಷ್ಟ ಉಂಟಾಗಿದೆ. ಪಂಚಾಯಿತಿ ಸದಸ್ಯ ಫಾರೂಕ್ ಸ್ಥಳಕ್ಕೆ ಧಾವಿಸಿ ಮನೆಯವರನ್ನು ಸ್ಥಳಾಂತರಿಸುವ ವ್ಯವಸ್ಥೆ ಮಾಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.