

ಬೆಂಗಳೂರು: ನಗರದ ವಿವಿಧ ಕಡೆಗಳಲ್ಲಿ ಶನಿವಾರ ಬಿರುಗಾಳಿಗೆ 18 ಮರ, 56 ಕೊಂಬೆಗಳು ಮುರಿದು ಬಿದ್ದಿವೆ. ಮೂವರಿಗೆ ಗಾಯವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದ್ವಿಚಕ್ರ ಸೇರಿ ಹಲವು ವಾಹನಗಳು ಜಖಂಗೊಂಡಿವೆ. ರಿಚ್ಮಂಡ್ ರಸ್ತೆಯ ಮೆಹಕ್ ಪಫ್ಯೂರ್ಮ್ಸ್ ಅಂಡ್ ಅಕ್ಸೆಸರೀಸ್ ಕಟ್ಟಡ ಒಳಭಾಗದಲ್ಲಿ ಬೆಳೆದಿದ್ದ ಗುಲ್ಮರ್ ಮರವು ರಸ್ತೆಯಲ್ಲಿ ಸಂಚರಿಸುತ್ತಿದ್ದ ಆಟೋದ ಮೇಲೆ ಬಿದ್ದಿದೆ. ಶಕ್ತಿ ಗಣಪತಿನಗರ ನಿವಾಸಿ, ಚಾಲಕ ದಿವಾಕರ್, ಪ್ರಯಾಣಿಕ ಸ್ಟಾಲಿನ್ಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.
ಸುಂಕೇನಹಳ್ಳಿ ಉದ್ಯಾನದಲ್ಲಿ ಗಾಳಿ ರಭಸಕ್ಕೆ ಮರದ ಕೊಂಬೆಗಳು ರಸ್ತೆಯಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನದ ಮುಂಭಾಗದ ಮೇಲೆ ಮುರಿದು ಬಿದ್ದಿರುವ ಪರಿಣಾಮ ಗಗನ್ ಮತ್ತು ಅವರ ಪುತ್ರ ಯುವಗೆ ಸಣ್ಣ ಗಾಯವಾಗಿದೆ. ಗಾಯಾಳುಗಳಿಗೆ ಪಾಲಿಕೆಯಿಂದ ಶೇಖರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಿನ್ನಿಮಿಲ್ ಎಂಪ್ಲಾಯಿಸ್ ಕಾಲನಿ, ಟೆಲಿಕಾಂ ಲೇಔಟ್ನ ಅಂಬಾಭವಾನಿ ದೇವಸ್ಥಾನದ ಬಳಿ ಹಾಗೂ ಬಸವನಗುಡಿಯ ಸೌತ್ಎಂಡ್ ಸರ್ಕಲ್ ರಸ್ತೆಯಲ್ಲಿ ರೆಂಬೆ ಬಿದ್ದ ರಭಸಕ್ಕೆ ವಾಹನಗಳು ಜಖಂಗೊಂಡಿದೆ. ಸಂಚಾರಿ ಪೋಲಿಸರ ಸಹಯೋಗದಲ್ಲಿ ಪಾಲಿಕೆ ಅರಣ್ಯ ಟಕ ವಿಭಾಗದ ಅಧಿಕಾರಿಗಳು ಮರ, ಮರದ ಕೊಂಬೆ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ವಲಯವಾರು ಮರ ಬಿದ್ದಿರುವ ವಿವರ
ವಲಯ ಮರ ಬಿದ್ದಿರುವುದು
ಪಶ್ಚಿಮ 9
ದಕ್ಷಿಣ 3
ಪೂರ್ವ 3
ಮಹದೇವಪುರ 1
ಯಲಹಂಕ 1
ದಾಸರಹಳ್ಳಿ 1