ಕುಣಿಗಲ್​ನಲ್ಲಿ 6 ತಿಂಗಳ ಹಿಂದೆ ಪತ್ತೆಯಾಗಿದ್ದ ಬೈಕ್​ನ ಹಿಂದಿದೆ ದುರಂತ ಪ್ರೇಮಕತೆ! ಯುವಕ-ಯುವತಿ-ತಾಯಿ... ಒಬ್ಬರ ಹಿಂದೆ ಒಬ್ಬರ ಸಾವು

love case kunigal
Published on

ಹುಲಿಯೂರುದುರ್ಗ: ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ರಾಜೇಂದ್ರಪುರ ಅರಣ್ಯ ಪ್ರದೇಶದಲ್ಲಿ ಮನುಷ್ಯನ ಅಸ್ಥಿಪಂಜರ ಸಿಕ್ಕಿದ್ದು, ಇದರ ಜಾಡು ಹಿಡಿದು ಹೊರಟ ಪೊಲೀಸರು ಭಯಾನಕ ರಹಸ್ಯ ಭೇದಿಸಿದ್ದಾರೆ. ಇದೇ ಅರಣ್ಯದಲ್ಲಿ 6 ತಿಂಗಳ ಹಿಂದೆ ಅನುಮಾನಸ್ಪದ ರೀತಿಯಲ್ಲಿ ಬೈಕ್​ ಪತ್ತೆಯಾಗಿತ್ತಾದರೂ, ಸವಾರನ ಸುಳಿವೇ ಸಿಕ್ಕಿರಲಿಲ್ಲ. ಇದೀಗ ಕಾಡಿನಲ್ಲಿ ಯುವಕನ ಅಸ್ಥಿಪಂಜರ ಸಿಕ್ಕಿದ್ದು, ಜತೆಗೆ ದುರಂತ ಪ್ರೇಮ ಪ್ರಕರಣವೂ ಬೆಳಕಿಗೆ ಬಂದಿದೆ. ಪ್ರೇಯಸಿ-ಪ್ರಿಯಕರ-ಯುವತಿಯ ತಾಯಿ ಸೇರಿ ಮೂವರೂ ಒಂದೊಂದು ಸಮಯದಲ್ಲಿ ದುರಂತ ಅಂತ್ಯ ಕಂಡಿದ್ದಾರೆ.

ಏನಿದು ಪ್ರಕರಣ?: ಕುಣಿಗಲ್ ತಾಲೂಕಿನ ಅರಮನೆ ಹೋನ್ನಮಾಚನಹಳ್ಳಿ ಗ್ರಾಮದ ಯುವಕ ಸಂತೋಷ್(27) ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಕಾರ್ಪೆಂಟರ್​ ಆಗಿ ಕೆಲಸ ಮಾಡುತ್ತಿದ್ದ. ಈತ ಕೆಬ್ಬಳ್ಳಿ ಗ್ರಾಮದ ಯುವತಿಯನ್ನ ಮನಸಾರೆ ಪ್ರೀತಿಸುತ್ತಿದ್ದ. ಇವರಿಬ್ಬರ ಪ್ರೀತಿಗೆ ಯುವತಿ ಮನೆಯವರ ವಿರೋಧವಿತ್ತು. ಆದರೂ ಸಂತೋಷ್​ ಮದುವೆ ಆಗುವ ಬಗ್ಗೆ ಯುವತಿಯ ಕುಟುಂಬಸ್ಥರ ಬಳಿ ಪ್ರಸ್ತಾಪ ಇಟ್ಟಿದ್ದ. ಆ ವೇಳೆ ಯುವತಿ ಮನೆಯವರು ಬುದ್ಧಿ ಹೇಳಿ ಕಳುಹಿಸಿದ್ದರಂತೆ. ಇದರಿಂದ ಮನನೊಂದ ಯುವಕ, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಈ ವಿಷಯ ತಿಳಿದು ಯುವತಿಯೂ ವಿಷ ಕುಡಿದಿದ್ದಳು. ಸಂತೋಷ್​ ಸಾವಿನ ದವಡೆಯಿಂದ ಪಾರಾಗಿಬಿಟ್ಟಿದ್ದ. ದುರಂತ ಅಂದ್ರೆ ಯುವತಿ ಬದುಕಲಿಲ್ಲ. ಪ್ರೇಯಸಿಯನ್ನ ಕಳೆದುಕೊಂಡು ಕಂಗೆಟ್ಟ ಸಂತೋಷ್, 6 ತಿಂಗಳ ಹಿಂದೆ ರಾಜೇಂದ್ರಪುರ ಅರಣ್ಯ ಪ್ರದೇಶದಲ್ಲಿ ಬೈಕ್ ಬಿಟ್ಟು ನಾಪತ್ತೆಯಾಗಿದ್ದ.

ಅರಣ್ಯದಲ್ಲಿ ಸಿಕ್ಕ ಬೈಕ್​ನ ಜಾಡು ಹಿಡಿದು ಹೊರಟ ಪೊಲೀಸರಿಗೆ ಇದು ಸಂತೋಷ್​ನದ್ದು ಎಂದು ಗೊತ್ತಾಗಿದೆ. ಆತನಿಗಾಗಿ ಹುಡುಕಾಟ ನಡೆಸಿದ್ದರೂ ಸುಳಿವೇ ಸಿಕ್ಕಿರಲಿಲ್ಲ. ಅತ್ತ ಆತನ ಕುಟುಂಬಸ್ಥರು ಮಿಸ್ಸಿಂಗ್ ಕೇಸ್​ ದಾಖಲಿಸಿದ್ದರು. ನಿನ್ನೆ(ಮೇ 20) ಅಸ್ಥಿಪಂಜರ ರಾಜೇಂದ್ರಪುರ ಅರಣ್ಯ ಪ್ರದೇಶದ ಕಲ್ಲಿನ ಬಳಿ ಕೊಳೆತ ಸ್ಥಿತಿಯಲ್ಲಿ ಅಸ್ಥಿಪಂಜರವೊಂದು ದನ ಮೇಯುಸುವವರ ಕಣ್ಣಿಗೆ ಬಿದ್ದಿತ್ತು. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದು 6 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಸಂತೋಷ್​ನದ್ದು ಎನ್ನಲಾಗಿದೆ. ಅತ್ತ ಮಗಳನ್ನು ಕಳೆದುಕೊಂಡು ಖಿನ್ನತೆಗೆ ಒಳಗಾಗಿದ್ದ ಯುವತಿಯ ತಾಯಿ ಎರಡು ತಿಂಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದರು. ಒಂದು ಪ್ರೇಮ ಕತೆಯಲ್ಲಿ ಮೂವರು ಸಾವನ್ನಪ್ಪಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net