

ಬೆಂಗಳೂರು: ದ್ವಿಚಕ್ರ ವಾಹನಕ್ಕೆ ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಸಂಚಾರ ನಿಯಮ ಉಲ್ಲಂಘಿಸಿ ಪೊಲೀಸರಿಗೆ ಅಶ್ಲೀಲವಾಗಿ ಕೈಸನ್ನೆ ಮಾಡುತ್ತಿದ್ದವ ಕೊನೆಗೂ ಸಿಕ್ಕಿಬಿದ್ದಿದ್ದಾನೆ.
ಪಟ್ಟೇಗಾರಪಾಳ್ಯದ ಆರ್.ನಿಖಿಲ್ ಬಂಧಿತ. ಜು.3ರ ಬೆಳಗ್ಗೆ ವಿಜಯನಗರದ ಮಾರೇನಹಳ್ಳಿ ಜಂಕ್ಷನ್ನಲ್ಲಿ ಕಾನ್ಸ್ಟೆಬಲ್ ಹರೀಶ್, ಡಿಜಿಟಲ್ ಪ್ರಕರಣ ದಾಖಲಿಸುತ್ತಿದ್ದರು. ಈ ವೇಳೆ ವಿಜಯನಗರ ಕ್ಲಬ್ ರಸ್ತೆ ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಬಂದ ನಿಖಿಲ್, ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದಿದ್ದ. ಕಾನ್ಸ್ಟೆಬಲ್ ತಮ್ಮ ಮೊಬೈಲ್ನಲ್ಲಿ ಫೋಟೋ ತೆಗೆದುಕೊಳ್ಳಲು ಮುಂದಾದಾಗ ಅಶ್ಲೀಲವಾಗಿ ಕೈಸನ್ನೆ ಮಾಡಿದ್ದ. ಈ ವೇಳೆ ಆರೋಪಿಯನ್ನು ಸ್ಥಳೀಯರು ಸುತ್ತುವರಿದು ಹಿಡಿದಿದ್ದರು. ಈತನ ಹತ್ತಿರ ಕಾನ್ಸ್ಟೆಬಲ್ ಹೋಗುತ್ತಿದಂತೆ ದ್ವಿಚಕ್ರ ವಾಹನವನ್ನು ಸ್ಥಳದಲ್ಲೇ ಬಿಟ್ಟು ಆರೋಪಿ ಪರಾರಿಯಾಗಿದ್ದ.
ದ್ವಿಚಕ್ರ ವಾಹನವನ್ನ ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ನಂಬರ್ ಪ್ಲೇಟ್ ನಕಲಿ ಎಂಬುದು ಗೊತ್ತಾಗಿತ್ತು. ಸಂಚಾರ ನಿಯಮ ಉಲ್ಲಂಘನೆಯ 55 ಪ್ರಕರಣ ಪತ್ತೆಯಾಗಿತ್ತು. ದ್ವಿಚಕ್ರ ವಾಹನ ಮಾಲೀಕ ಪಟ್ಟೇಗಾರಪಾಳ್ಯದ ನಿಖಿಲ್ ಎಂಬಾತನ ವಿರುದ್ಧ ವಿಜಯನಗರ ಸಂಚಾರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ದ್ವಿಚಕ್ರ ವಾಹನ ಜಪ್ತಿ ಮಾಡಿ 28,500 ರೂ. ದಂಡ ವಸೂಲಿ ಮಾಡಿದ್ದಾರೆ. ತಲೆಮರೆಸಿಕೊಂಡಿದ್ದ ಆರೋಪಿ ನಿಖಿಲ್ ಮಂಗಳವಾರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಎಎನ್ಪಿಆರ್ ಅಸ್ತ್ರ: ಬೈಕ್ಗಳಿಗೆ ನಕಲಿ ನಂಬರ್ ಪ್ಲೇಟ್ ಬಳಸಿ ಸಂಚಾರ ನಿಯಮ ಉಲ್ಲಂನೆ ಮಾಡುವುದರ ಜತೆಗೆ ಸಂಚಾರ ಪೊಲೀಸರಿಗೆ ಸವಾರರು ಅಶ್ಲೀಲವಾಗಿ ಕೈಸನ್ನೆ ಮಾಡುತ್ತಾರೆ. ಇಂತವರ ಫೋಟೋ ತೆಗೆದು ಆಟೋಮೆಟಿಕ್ ನಂಬರ್ ಪ್ಲೇಟ್ ರೆಕ್ನೋನೇಷನ್ ಕ್ಯಾಮರಾ (ಎಎನ್ಪಿಆರ್) ಸಹಾಯದಿಂದ ಅಸಲಿ ವಾಹನಗಳ ಮಾಲೀಕ ಪತ್ತೆ ಮಾಡಲಾಗುತ್ತದೆ. ಆನಂತರ ನಕಲಿ ನಂಬರ್ ಪ್ಲೇಟ್ ಬಳಸುವ ವಾಹನ ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ವಾಹನಗಳಿಗೆ ನಕಲಿ ನಂಬರ್ ಪ್ಲೇಟ್ ಬಳಸಿ ಸಂಚಾರ ನಿಯಮ ಉಲ್ಲಂಘಿಸುವರ ಸಂಖ್ಯೆ ಹೆಚ್ಚಾಗಿದೆ. ತಾಂತ್ರಿಕ ಮಾಹಿತಿ ಆಧರಿಸಿ ಇಂತಹ ವಾಹನಗಳನ್ನು ಪತ್ತೆ ಮಾಡಲಾಗುತ್ತದೆ.
| ಡಾ.ಬಿ.ಆರ್. ರವಿಕಾಂತೇಗೌಡ ಜಂಟಿ ಪೊಲೀಸ್ ಆಯುಕ್ತ(ಸಂಚಾರ)