ದಿನಕ್ಕೊಂದು ತೆರೆದುಕೊಳ್ಳುತ್ತಿದೆ ಕಣ್ಣೀರಿನ ಕಥೆ

ದಿನಕ್ಕೊಂದು ತೆರೆದುಕೊಳ್ಳುತ್ತಿದೆ ಕಣ್ಣೀರಿನ ಕಥೆ
Published on

ಕೆ.ಆರ್.ಪ್ರಸಿನ್ ಹಾಸನ

ತಾಲೂಕಿನ ಮೊಸಳೆ ಹೊಸಳ್ಳಿ ಗಣಪತಿ ವಿಸರ್ಜನೆ ವೇಳೆ ಮೃತಪಟ್ಟ ಕುಟುಂಬದ ಕಣ್ಣೀರಿನ ಕಥೆ ದಿನಕ್ಕೊಂದು ತೆರೆದುಕೊಳ್ಳುತ್ತಿದೆ.

ಮಗನನ್ನು ಕಳೆದುಕೊಂಡ ನೋವು ಒಂದೆಡೆಯಾದರೆ, ಅವರು ಉಳಿಸಿ ಹೋದ ಒಂದೊಂದು ನೆನಪುಗಳು ಆಗಾಗ್ಗೆ ಕರುಳನ್ನು ಹಿಂಡುತ್ತಿವೆ.

ಮಗನ ಶೂ, ಊಟದ ಡಬ್ಬಿ, ಅವರು ಹಾಕುತ್ತಿದ್ದ ಬಟ್ಟೆ ನೋಡಿದ ಕ್ಷಣ ಪಾಲಕರ ಎದೆಯಲ್ಲಿ ದುಃಖ ಉಮ್ಮಳಿಸಿ ಬರುತ್ತಿದೆ. ಮಗನನ್ನು ಪದೇ ಪದೆ ನೆನೆದು ಕಣ್ಣೀರಾಗುತ್ತಿದ್ದಾರೆ.

ಭಾನುವಾರ ಬೆಳಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಸಾಂತ್ವನ ಹೇಳಲು ಹೊಳೆನರಸೀಪುರ ತಾಲೂಕಿನ ಡಣಾಯಕನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭ ದುರಂತದಲ್ಲಿ ಮೃತಪಟ್ಟ ಈಶ್ವರ್‌ನ ತಂದೆ ರವಿ ಕುಮಾರ್, ತಾಯಿ ಕಾಂತಾಮಣಿ ಗೋಳಾಡಿದರು. ದೇವೇಗೌಡರನ್ನು ನೋಡಿದ ತಕ್ಷಣ ನೀನು ಬಂದಲಾ ನನ್ನಪ್ಪನೇ... ಅಷ್ಟೇ ಸಾಕು ನನ್ನ ಮಗ ಎಷ್ಟೇ ಓದಿದರು ದೇವೇಗೌಡರನ್ನು ನಮ್ಮ ಮನೆಗೆ ಕರೆಸಿಕೊಳ್ಳಲು ಆಗುತ್ತಿರಲಿಲ್ಲ ನೀನು ಸತ್ತು ಕರೆಸೆಕೊಂಡೆಯಲ್ಲ ಮಗನೇ ಎಂದು ಗೋಳಾಡಿದರು. ಮಾಜಿ ಪ್ರಧಾನಿ ಸಾಂತ್ವನ ಹೇಳುವ ಪ್ರಯತ್ನ ಮಾಡಿದರು. ಈಶ್ವರ್‌ನ ಸಹೋದರ ದೀಕ್ಷಿತ್‌ನ ವಿದ್ಯಾಭ್ಯಾಸದ ಜವಾಬ್ದಾರಿ ನೋಡಿಕೊಳ್ಳುವ ಭರವಸೆ ನೀಡಿದರು.

ಪ್ರೀತಿ ವಿಷಯ ಹೇಳಿಕೊಂಡಿದ್ದ ಪ್ರವೀಣ್

ದೇವರು ತಂದೆ ತಾಯಿಗೆ ಮೋಸ ಮಾಡಿದ. ಪ್ರೀತಿಗೂ ದೇವರು ಮೋಸ ಮಾಡಿದ್ನಲ್ಲ ಸಾರ್ ಎಂದು ಮಗನ ಪ್ರೀತಿ ವಿಷಯವನ್ನು ಹೇಳಿಕೊಂಡು ಕಬ್ಬನಹಳ್ಳಿ ಗ್ರಾಮದ ಪ್ರವೀಣ್‌ನ ತಾಯಿ ಭಾಗ್ಯ ರೋಧಿಸಿದರು.

ಪ್ರವೀಣ್ ನನಗೆ ಮಗ ಮಾತ್ರ ಆಗಿರಲಿಲ್ಲ. ಸ್ನೇಹಿತ ಕೂಡ ಆಗಿದ್ದ. ಏನೆ ಇದ್ದರೂ ಹಂಚಿಕೊಳ್ಳುತ್ತಿದ್ದ. ಅವನಿಲ್ಲದ ಅರೆ ಗಳಿಗೆಯೂ ಕಳೆಯಲು ಆಗುತ್ತಿಲ್ಲ ಎಂದು ಬಿಕ್ಕಿಬಿಕ್ಕಿ ಅತ್ತರು.

ಸಂಬಂಧಿಕರ ಮಗಳನ್ನೇ ಮಗ ಇಷ್ಟಪಡ್ತಿದ್ದ. ಮುಂದಿನ ವರ್ಷ ಮದುವೆ ಮಾಡುವ ತೀರ್ಮಾನ ಮಾಡಿದ್ದೆವು ಈಗ ಅವನಿಲ್ಲ. ಪ್ರತಿದಿನ ಗೆಳತಿ ಜತೆ ಮಾತಾಡ್ತಿದ್ದ ನನಗೂ ಫೊನ್ ಕೊಟ್ಟು ಮಾತನಾಡಿಸುತ್ತಿದ್ದ ಈಗ ನಾನು ನನ್ನ ನೋವು ಯಾರಿಗೆ ಹೇಳಿಕೊಳ್ಳಲಿ. ಈಗ ಆ ಪ್ರೀತಿಗೂ ಮೋಸ ಆಯಿತು. ಅವನ ಬಟ್ಟೆ, ಶೂ, ಅವನ ವಸ್ತುಗಳು ಮನೆಯೊಳಗೆ ನನ್ನ ಕಾಡ್ತಿವೆ ಮನೆಯೊಳಗೆ ಹೋಗಲು ಆಗ್ತಿಲ್ಲ ಎಂದು ಗೋಳಾಡಿದರು.

ನಾಯಿಯ ಮೂಕ ರೋಧನೆ: ಪ್ರೀತಿಯಿಂದ ಸಾಕಿದ್ದ ಮಾಲೀಕನನ್ನು ಕಳೆದುಕೊಂಡು ಮೂಕರೋಧನೆಯನ್ನು ನಾಯಿ ಅನುಭವಿಸುತ್ತಿದೆ.

ಕಬ್ಬನಹಳ್ಳಿ ಗ್ರಾಮದ ಪ್ರವೀಣ್ 5 ವರ್ಷದ ಹಿಂದೆ ಲ್ಯಾಬ್ರಡಾಲ್ ನಾಯಿ ತಂದು ಸಾಕಿದ್ದ. ಅದಕ್ಕೆ ದಿವಾನ್ ಎಂದು ಹೆಸರಿಟ್ಟು ದಿನ ಅದರ ಜತೆ ಕೆಲ ಸಮಯಕಳೆಯುತ್ತಿದ್ದ. ಪ್ರವೀಣ್ ಕೆಲಸಕ್ಕೆ ಹೋಗುವಾಗ ಸ್ವಲ್ಪ ದೂರು ಹೋಗಿ ಕಳುಹಿಸಿಬರುತ್ತಿತ್ತು. ಸಂಜೆ ಪ್ರವೀಣ್ ಕೆಲಸ ಮುಗಿಸಿಬರುವುದಕ್ಕಾಗಿ ಮನೆ ಮೇಲೆ ಹೋಗಿ ಕಾಯುತ್ತಿತ್ತು ಎಂದು ಹೇಳುತ್ತಲೇ ತಂದೆ ಹನುಮಯ್ಯ ಕಣ್ಣಾಲಿಗಳಲ್ಲಿ ನೀರಾದವು. ಎರಡು ದಿನಗಳಿಂದ ಪ್ರವೀಣ್‌ನನ್ನು ಕಾಣದೆ ದಿವಾನ್ ನಾಯಿ ಮೂಕ ರೋಧನೆ ಅನುಭವಿಸುತ್ತಿದೆ. ನೋವಿನ ನಡುವೆ ದಿವಾನ್‌ನನ್ನು ಪೋಷಕರಾದ ಹನುಮಯ್ಯ-ಭಾಗ್ಯ ಸಮಾಧಾನಪಡಿಸುತ್ತಿದ್ದಾರೆ.

ಭುವನೇಶ್ ಬಂಧನಕ್ಕೆ ಸಿದ್ಧತೆ: ಬೆಳ್ಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಭುವನೇಶ್‌ನನ್ನು ಭಾನುವಾರ ಬೆಳಗ್ಗೆ ಪೊಲೀಸರು ವಶಕ್ಕೆ ಪಡೆದು ಬಂಧನಕ್ಕೆ ಸಿದ್ಧತೆ ನಡೆಸಿದ್ದರು.

ಈ ವೇಳೆ ನನಗೆ ಅನಾರೋಗ್ಯವಿದೆ ಚಿಕಿತ್ಸೆ ಪಡೆಯಬೇಕು ಎಂದಿದ್ದರಿಂದ ಮೆಡಿಕಲ್ ಟೆಸ್ಟ್‌ಗೆ ಹಿಮ್ಸ್ ಆಸ್ಪತ್ರೆಗೆ ಕರೆತರಲಾಯಿತು.

ಹೃದಯ ತಪಾಸಣೆಗಾಗಿ ಸಂಢಜೆ ವೇಳೆಗೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಆರೋಗ್ಯ ಸುಧಾರಣೆ ನಂತರ ಪೊಲೀಸರು ವಶಕ್ಕೆ ಪಡೆದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ.

ಹಂಪ್ ಹಾಕುವ ಕೆಲಸ ಆರಂಭ: ಹಾಸನ ತಾಲೂಕಿನ ಮೊಸಳೆ ಹೊಸಳ್ಳಿಯಲ್ಲಿ ದುರಂತ ಸಂಭವಿಸಲು ಹಂಪ್ ಇಲ್ಲದೆ ಟ್ರಕ್ ವೇಗವಾಗಿ ಬಂದದ್ದು ಒಂದು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದರು.

ಅಲ್ಲದೆ, ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರು, ವಿಪಕ್ಷ ನಾಯಕ ಆರ್.ಅಶೋಕ್ ಬಳಿಯೂ ಸ್ಥಳೀಯರು ಮನವಿ ಮಾಡಿದ್ದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಹಂಪ್ ಹಾಕುವಂತಿಲ್ಲ ಎಂಬ ನಿಯಮವಿದ್ದರೂ ಸ್ಥಳೀಯರ ಆಕ್ರೋಶ ಹಾಗೂ ಘೋರ ದುರಂತದಿಂದ ಎನ್.ಎಚ್.373ರಲ್ಲಿ ಹಂಪ್ ಹಾಕುವ ಕೆಲಸವನ್ನು ಹೆದ್ದಾರಿ ಪ್ರಾಧಿಕಾರ ಮಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net