

ಕಾರವಾರ: ತಾಯಿಯೊಬ್ಬಳ ಹೊಟ್ಟೆಯಲ್ಲಿ ಮಗುವಿನ ಜತೆ ಗಡ್ಡೆಯೂ ಬೆಳೆಯುತ್ತಿತ್ತು. ಅದನ್ನು ಗುರುತಿಸಿದ ಕಾರವಾರದ ಕ್ರಿಮ್ಸ್‌ನ ವೈದ್ಯರ ತಂಡವು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿ, ತಾಯಿ ಹಾಗೂ ಮಗು ಇಬ್ಬರ ಪ್ರಾಣ ಉಳಿಸಿದೆ.
ಕ್ಲಿಷ್ಟಕರ ಮತ್ತು ಸವಾಲಿನಿಂದ ಕೂಡಿರುವ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಕಾರವಾರ ವೈದ್ಯಕೀಯ ಮತ್ತು ವಿಜ್ಞಾನ ಸಂಸ್ಥೆಯ ಹೆರಿಗೆ ವಿಭಾಗದ ಮುಖ್ಯಸ್ಥ, ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ. ಶಿವಾನಂದ ಕುಡ್ತಲಕರ ನೇತೃತ್ವದ ತಂಡ ಮಹಿಳೆ ಮತ್ತು ಮಗುವಿನ ಜೀವ ಉಳಿಸಿದೆಯೆಲ್ಲದೆ ಅವರ ಕುಟುಂಬದ ಮೊಗದಲ್ಲಿ ಮಂದಹಾಸ ಮೂಡಿಸುವುದರೊಂದಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.
ನಗರದ ನಿವಾಸಿ ಆಫ್ರಿನ್ ಶೇಖ್ ಅವರು ಗರ್ಭಿಣಿಯಾದ ಬಳಿಕ ಕ್ರಿಮ್ಸ್ ಆಸ್ಪತ್ರೆಯ ಹೆರಿಗೆ ತಜ್ಞೆ ಡಾ. ಸುಮನಾ ಅವರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು. ಗರ್ಭಕೋಶದಲ್ಲಿ ಭ್ರೂಣ ಬೆಳವಣಿಗೆಯಾಗುವುದರೊಂದಿಗೆ ಗಡ್ಡೆಯೂ ಕಾಣಿಸಿಕೊಂಡು. ಗಡ್ಡೆ ಬೆಳವಣಿಗೆಯಾಗಿರುವ ಸ್ಥಳ ಹೆರಿಗೆಯ ಸಂದರ್ಭದಲ್ಲಿ ಮಗು ಮತ್ತು ತಾಯಿಗೆ ಅಪಾಯ ತಂದೊಡ್ಡುವ ಸಾಧ್ಯತೆ ಇತ್ತು. ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಸ್ವಲ್ಪವೂ ಕೈಮೀರಿದರೆ ಗಡ್ಡೆಯಿಂದ ರಕ್ತಸ್ರಾವ ಆಗುವ ಸಾಧ್ಯತೆ ಇತ್ತು.
ಈ ವಿಷಯವನ್ನು ಡಾ. ಸುಮನಾ ಅವರು ಅವರು ಹೆರಿಗೆ ವಿಭಾಗದ ಮುಖ್ಯಸ್ಥ ಡಾ. ಶಿವಾನಂದ ಕುಡ್ತಲಕರ ಅವರ ಗಮನಕ್ಕೆ ತಂದರು. ಹೆರಿಗೆಗೆ ಸಂಬಂಧಿಸಿದಂತೆ ಅನೇಕ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಮಾಡಿದ ಅನುಭವ ಹೊಂದಿರುವ ಡಾ. ಕುಡ್ತಲಕರ ಅವರು ಈ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿದರು. ಗರ್ಭಿಣಿಯ ಕುಟುಂಬದವರಿಗೆ ವಿಷಯ ತಿಳಿಸಿ ಅವರ ಅನುಮತಿಯ ಮೇರೆಗೆ ಸವಾಲು ಸ್ವೀಕರಿಸಿದರು. ಗರ್ಬಿಣಿಯ ಗರ್ಭಕೋಶದಲ್ಲಿ ಬೆಳೆದಿರುವ ಗಡ್ಡೆಗೆ, ಮಗುವಿಗೆ ಮತ್ತು ತಾಯಿಗೆ ಯಾವುದೇ ರೀತಿಯ ತೊದರೆ ಆಗದಂತೆ ನೋಡಿ ಕೊಳ್ಳುವ ದೊಡ್ಡ ಜವಾಬ್ದಾರಿ ವೈದ್ಯರ ಮೇಲಿತ್ತು.
ಡಾ. ಕುಡ್ತಲಕರ ನೇತೃತ್ವದ ಹೆರಿಗೆ ತಜ್ಞೆ ಡಾ. ಸ್ಪಂದನಾ ಎಸ್., ಡಾ. ಸ್ನೇಹಾ, ಡಾ. ಕೌಶಲ್ಯ, ಹಿರಿಯ ಶುಶ್ರೂಷಕಿರಾದ ಪ್ರಭಾ ನಾಯ್ಕ, ಕನ್ಸೆಪ್ಟಾ ಅವರನ್ನೊಳಗೊಂಡ ತಂಡ ಯಶಸ್ವಿಯಾಗಿ ಶಸ್ತç ಚಿಕಿತ್ಸೆ ನಡೆಸುವ ಮೂಲಕ ತಾಯಿ ಮತ್ತು ಮಗುವಿನ ಮುಖದಲ್ಲಿ ನಗು ಅರಳುವಂತೆ ಮಾಡಿದೆ. ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ.
ಕ್ರಿಮ್ಸ್ನ ವೈದ್ಯರ ಸೇವೆಯನ್ನು ಗುರುತಿಸಿ ಗೋವಾದ ಹ್ಯೂಮನ್ ಡೆವಲಪ್‌ಮೆಂಟ್ ಪ್ರೊಟೆಕ್ಷನ್ ಸೊಸೈಟಿ ಶುಕ್ರವಾರ ಆಸ್ಪತ್ರೆಯಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಸನ್ಮಾನ ಸ್ವೀಕರಿಸಿದ ಡಾ. ಶಿವಾನಂದ ಕುಡ್ತಲಕರ ಅವರು ಮಾತನಾಡಿ, ಹೆಸರಿಗೆ ದಾಖಲಾಗಿರುವ ಅಫ್ರೀನ್ ಶೇಖ್ ಅವರಲ್ಲಿ ಕಾಣಿಸಿಕೊಂಡಿರುವ ಸಮಸ್ಯೆಯ ಬಗ್ಗೆ ಅವರ ಕುಟುಂಬದವರಿಗೆ ವಿಷಯ ತಿಳಿಸಲಾಯಿತು. ಎಲ್ಲರ ಅನುಮತಿ ಇದ್ದರೆ ಸವಾಲು ಸ್ವೀಕರಿಸುವುದಾಗಿ ತಿಳಿಸಿದಾಗ ಅವರು ಒಪ್ಪಿಗೆ ನೀಡಿದರು ಎಂದರು.
ಸಮಸ್ಯೆ ಎಂತಹದ್ದೇ ಬರಲಿ ನಾವು ಅದನ್ನು ಸವಾಲಾಗಿ ಸ್ವೀಕರಿಸುತ್ತಿದ್ದೇವೆ. ಹೆರಿಗೆ ವಿಭಾಗಕ್ಕೆ ಸಂಬಂಧಿಸಿದಂತೆ ನಾವು ಬೇರೆ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಎಂದು ಸಲಹೆ ನೀಡುವುದು ತುಂಬಾ ಕಡಿಮೆ, ಒಳ್ಳೆಯ ಚಿಕಿತ್ಸೆ ನೀಡಬೇಕು, ಆಸ್ಪತ್ರೆಗೆ ಒಳ್ಳೆಯ ಹೆಸರು ತರಬೇಕು ಎನ್ನುವ ಉದ್ದೇಶ ನಮಗೂ ಇದೆ. ಆದರೆ, ಕೆಲವೊಂದು ಸಂದರ್ಭದಲ್ಲಿ ನಡೆದ ಬೆಳವಣಿಗೆಗೆಗಳು ನಮಗೆ ಆತ್ಮಸ್ಥೈರ್ಯವನ್ನು ಕುಂದಿಸುತ್ತದೆ. ಅದು ಆಗಬಾರದು ಎನ್ನುವುದೇ ನಮ್ಮ ಬಯಕೆಯಾಗಿದೆ ಎಂದರು.
ವೈದ್ಯರನ್ನು ಸನ್ಮಾನಿಸಿದ ಸೊಸೈಟಿ ಅಧ್ಯಕ್ಷೆ ಖತಿಜಾ ಖಾನ್ ಮಾತನಾಡಿ, ಕಾರವಾರ ಮೆಡಿಕಲ್ ಕಾಲೇಜಿನ ಹೆರಿಗೆ ವಿಭಾಗದ ತಂಡ ಉತ್ತಮ ಕೆಲಸ ಮಾಡಿದೆ. ಸವಾಲಿನಿಂದ ಕೂಡಿದ ಅನೇಕ ಶಸ್ತ್ರಚಿಕಿತ್ಸೆಗಳನ್ನು ಡಾ. ಕುಡ್ತಲಕರ ಅವರು ಮಾಡಿದ್ದಾರೆ ಎನ್ನುವುದನ್ನು ತಿಳಿದುಕೊಂಡಿದ್ದೇನೆ ಎಂದರು.
ವೈದ್ಯರು ಮಾಡಿರುವ ಕಾರ್ಯ ಕೇವಲ ವಿಭಾಗಕ್ಕಷ್ಟೇ ಅಲ್ಲ ಇಡೀ ಕಾಲೇಜಿಗೆ ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ಇದೇ ರೀತಿಯ ಸೇವೆಗಳು ಇಲ್ಲಿನ ವೈದ್ಯರಿಂದ ಮೂಡಿಬರಲಿ ಎಂದು ಶುಭ ಹಾರೈಸಿದರು.
ವೈದ್ಯಕೀಯ ಅಧೀಕ್ಷಕ ಕಚೇರಿಯ ಸಿಬ್ಬಂದಿ ಗೌರೀಶ ನಾಯ್ಕ, ಮತ್ತು ಕಿಶನ್ ವಾರಿಕ್, ಸಂದೇಶ ಗುನಗಿ, ಸರ್ಜನ್ ಕಚೇರಿಯ ಮೇಲ್ವಿಚಾರಕಿ ಸ್ವಪ್ನಾ ನಾಯ್ಕ, ಎಫ್‌ಡಿಸಿ ಶ್ರೀಧರ ಕೆ. ಹೊನ್ನಾವರ, ಪೂಜಾ ನಾಯ್ಕ, ಪೂಜಾ ಗಾಂವಕರ್, ಸಾಮಾಜಿಕ ಕಾರ್ಯಕರ್ತ ಸೂರಜ್ ಕುರುಮಕರ್, ಹ್ಯೂಮನ್ ಡೆವಲಪ್‌ಮೆಂಟ್ ಪ್ರೊಟೆಕ್ಷನ್ ಸೊಸೈಟಿಯ ಮಹಮ್ಮದ್ ಹನೀಫ್ ಖುರೇ಼ಇ, ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಫಿಯಾನ್ ಶೇಖ್, ಉಪಾಧ್ಯಕ್ಷ ಮಹಮ್ಮದ್ ಮೊಹಷಿನ್ ಶೇಖ್ ಇದ್ದರು.
ಇದನ್ನೂ ಓದಿ: ಮಹಾಬಲೇಶ್ವರ, ಮುರ್ಡೇಶ್ವರ ದೇವರ ದರ್ಶನ ಪಡೆದ ಗವರ್ನರ್