MLA ಪುತ್ರನ ಕಾರು ಅಪಘಾತ: ಸಾವಿಗೂ ಮುನ್ನ ತರಾತುರಿಯಲ್ಲಿ ಪ್ರೇಯಸಿ ಖರೀದಿಸಿದ್ದೇನು?

karunakara
Published on

ಬೆಂಗಳೂರು: ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ಸೋಮವಾರ ತಡರಾತ್ರಿ 1.30ರ ಸುಮಾರಿಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ತಮಿಳುನಾಡು ಡಿಎಂಕೆ ಶಾಸಕ ವೈ. ಪ್ರಕಾಶ್​ರ ಏಕೈಕ ಪುತ್ರ ಕರುಣಾಸಾಗರ್​ ಸೇರಿ 7 ಮಂದಿ ದುರಂತ ಅಂತ್ಯ ಕಂಡಿದ್ದಾರೆ. ಕರುಣಾಸಾಗರ್​ನ ಭಾವಿ ಪತ್ನಿ ಬಿಂದು ಕೂಡ ಈ ಅಪಘಾತದಲ್ಲಿ ಮೃತಪಟ್ಟಿದ್ದು, ಈಕೆ ಸಂಭವಿಸುವ ಕೆಲ ಗಂಟೆಗಳ ಮುನ್ನ ಸ್ನೇಹಿತೆ ಬಿಂದು ಬಾರ್​ವೊಂದರಲ್ಲಿ ಮದ್ಯ ಖರೀದಿಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಸೋಮವಾರ ರಾತ್ರಿ 9 ಗಂಟೆಗೆ ಬಾರ್​ ಕ್ಲೋಸ್​ ಆಗುತ್ತೆಂಬ ಕಾರಣಕ್ಕೆ ತರಾತುರಿಯಲ್ಲಿ ಕರುಣಾಸಾಗರ್​ನ ಭಾವಿ ಪತ್ನಿ ಬಿಂದು ಮತ್ತು ಗೆಳತಿ ಇಶಾ ಇಬ್ಬರೂ ಹೋಗಿ ಮದ್ಯ ಖರೀದಿಸಿದ್ದಾರೆ. ನಂತರ ಕರುಣಾಸಾಗರ್​ ಆಗಮಿಸಿದ್ದ. ಕಾರು ಅಪಘಾತಕ್ಕೂ ಮುನ್ನ ಮದ್ಯದ ಪಾರ್ಟಿ ಮಾಡಿದ್ದಾರೆ ಎನ್ನಲಾಗಿದ್ದು, ಕೋರಮಂಗಲದಲ್ಲಿ ಪಾರ್ಟಿಯನ್ನು ಎಲ್ಲಿ ಮಾಡಿದ್ದಾರೆಂದು ಗೊತ್ತಾಗಿಲ್ಲ. ಪೊಲೀಸರು ಸ್ಥಳ ಪತ್ತೆ ಮಾಡುತ್ತಿದ್ದಾರೆ. ಇನ್ನು ಅವರು ಮದ್ಯಪಾನ ಮಾಡಿದ್ದರೇ ಅಥವಾ ಇಲ್ಲವೇ ಎಂಬುದರ ಕುರಿತು ವೈದ್ಯಕೀಯ ವರದಿ ನಾಳೆ ಪೊಲೀಸರ ಕೈಸೇರಲಿದೆ.

ಕರುಣಾಸಾಗರ್​ ಮತ್ತು ಉತ್ಸವ್​ ಇಬ್ಬರೂ ತಮಿಳುನಾಡಿನಿಂದ ಆಡಿ ಕ್ಯೂ 3 ಕಾರಿನಲ್ಲಿ ಬೆಂಗಳೂರಿಗೆ ಬಂದಿದ್ದರು. ಇಷಿಕಾ ಬಿಸ್ವಾಸ್​, ಡಾ.ಧನುಷಾ, ಬಿಂದು, ಕಾರ್ತಿಕ್​ ಮತ್ತು ಅಕ್ಷಯ್​ ಗೋಯಲ್​ ಈ ಐವರೂ ಬೆಂಗಳೂರಿನಲ್ಲಿ ವಾಸವಿದ್ದರು. ಈ ಐವರ ಪೈಕಿ ಕೆಲವರು ಜೋಲಾ ಸರ್ವಿಸ್​ ಅಪಾರ್ಟ್​ಮೆಂಟ್​ನಲ್ಲಿನ ಪಿಜಿಯಲ್ಲಿ ವಾಸವಿದ್ದರು. ಬಿಂದುನನ್ನು ಭೇಟಿ ಆಗಲು ಬಂದ ಕರುಣಾಸಾಗರ್​, ಈ ಐವರನ್ನೂ ಕಾರಿನಲ್ಲಿ ಊಟಕ್ಕೆ ಕರೆದೊಯ್ದಿದ್ದ. ಅಲ್ಲದೆ ಜಾಲಿರೈಡ್​ ಮಾಡುತ್ತಾ ಬರುತ್ತಿದ್ದರು ಎನ್ನಲಾಗಿದೆ. ಮಾರ್ಗಮಧ್ಯೆ ಕೋರಮಂಗಲದಲ್ಲಿ ನಿಯಂತ್ರಣ ತಪ್ಪಿದ ಕಾರು ಫುಟ್​ಪಾತ್ ಮೇಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ 7 ಮಂದಿಯೂ ದುರಂತ ಅಂತ್ಯ ಕಂಡಿದ್ದಾರೆ. ಪರಸ್ಪರ ಪ್ರೀತಿಸುತ್ತಿದ್ದ ಕರುಣಾಸಾಗರ್​ ಹಾಗೂ ಬಿಂದು ಇಬ್ಬರಿಗೂ ಸದ್ಯದಲ್ಲೇ ಮದುವೆ ಮಾಡಲು ಕರುಣಾಸಾಗರ್ ಕುಟುಂಬ ನಿರ್ಧರಿಸಿತ್ತು. ಅಷ್ಟರಲ್ಲಿ ಇಬ್ಬರೂ ಜತೆಯಲ್ಲೇ ಸಾವಿನ ಮನೆಯ ಕದ ತಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net