ಕನ್ನಡ ಜ್ಯೋತಿ ರಥಕ್ಕೆ ಸಾಂಕೇತಿಕ ಚಾಲನೆ

IMG-20240919-WA0372
Published on

ಶ್ರೀರಂಗಪಟ್ಟಣ: ಡಿ.20 ರಿಂದ ಮಂಡ್ಯ ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲರನ್ನೂ ಆಹ್ವಾನಿಸಲು ಕನ್ನಡ ಜ್ಯೋತಿ ರಥ ಸಿದ್ಧವಾಗಿದ್ದು ಗುರುವಾರ ಸಾಂಕೇತಿಕವಾಗಿ ಚಾಲನೆ ನೀಡಲಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.


ಪಟ್ಟಣ ಸಮೀಪದ ಗಂಜಾಂನ ಶ್ರೀನಿಮಿಷಾಂಬ ದೇಗುಲದ ಸನ್ನಿಧಿಯಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಿದ್ಧವಾಗಿರುವ ತಾಯಿ ಭುವನೇಶ್ವರಿ ರಥಕ್ಕೆ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಅವರೊಂದಿಗೆ ಪೂಜೆ ಸಲ್ಲಿಸಿ ಬಳಿಕ ಮಾತನಾಡಿದರು.


ಮಂಡ್ಯ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದ್ದು, ಆಚರಣೆಯ ಸಂಭ್ರಮದಲ್ಲಿದೆ. ಅದರ ಭಾಗವಾಗಿ ವಿಶೇಷ ವಿನ್ಯಾಸಗಳಿಂದ ತಯಾರಿಗೊಂಡಿರುವ ಕನ್ನಡದ ರಥಕ್ಕೆ ಶಕ್ತಿದೇವಿಯ ಸಾನ್ನಿಧ್ಯದಲ್ಲಿ ಚಾಲನೆ ನೀಡಿದ್ದು, ಈ ರಥ ಅಧಿಕೃತವಾಗಿ ಸೆ.22ರಂದು ಉತ್ತರ ಕನ್ನಡದ ಭುವನಗಿರಿಯಲ್ಲಿರುವ ತಾಯಿ ಭುವನೇಶ್ವರಿ ದೇವಾಲಯದಿಂದ ಚಾಲನೆ ನೀಡಲಾಗುವುದು.


ಈ ರಥವು 87 ದಿನಗಳ ಕಾಲ ರಾಜ್ಯಾದ್ಯಂತ ಸಂಚರಿಸಿ ಸಕ್ಕರೆ ನಾಡಿನಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ಮರೆಯದೆ ಬನ್ನಿ ಎಂದು ಅಕ್ಕರೆಯ ಆಹ್ವಾನ ನೀಡಲಿದೆ. ಮಂಡ್ಯ ಜಿಲ್ಲೆಯ ವಿಶೇಷತೆ ಸಾರುವಂತೆ ಕನ್ನಡ ನುಡಿ ಕಲಿಸುವ ತಾಯಿ ಭುವನೇಶ್ವರಿ, ಜಿಲ್ಲೆಯ ಜೀವನದಿ ತಾಯಿ ಕಾವೇರಿ, ರೈತನೊಂದಿಗೆ ಉಳುಮೆ ಮಾಡುತ್ತಿರುವ ಎತ್ತುಗಳು, ಮಂಡ್ಯ ಜಿಲ್ಲೆ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಅವರ ಸುಂದರ ಆಕೃತಿಗಳು ಜಿಲ್ಲೆಯ ಬಗ್ಗೆ ಹೆಮ್ಮೆ ಉಂಟು ಮಾಡಲಿವೆ. ಸಮ್ಮೇಳನಕ್ಕೆ ಬರುವ ಎಲ್ಲರಿಗೂ ಕನ್ನಡ ನುಡಿಯ ಸವಿ ಉಣಬಡಿಸಲು ಸಿದ್ಧವಾಗಿದೆ ಎಂಬುವ ರೀತಿ ಅಲಂಕೃತವಾಗಿರುವ ಕನ್ನಡ ರಥ ಕನ್ನಡಿಗರ ಕಣ್ಮನ ಸೆಳೆಯಲಿದೆ ಎಂದರು.


ಮಹೇಶ್ ಜೋಶಿ ಮಾತನಾಡಿ, ತಾಯಿ ಭುವನೇಶ್ವರಿಯ ಕನ್ನಡ ರಥ ತಾಯಿ ನಿಮಿಷಾಂಬ ಸನ್ನಿಧಿಯಲ್ಲಿ ಚಾಲನೆ ಪಡೆದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಯಶಸ್ಸಿನ ಸಂಕೇತವಾಗಿ ಹೊರಹೊಮ್ಮಿದೆ. ಇದು ನಮ್ಮ ಸಂಸ್ಕೃತಿಯ ಪ್ರತೀಕವಾಗಿ ರಾಜ್ಯದ ಮೂಲೆ ಮೂಲೆಗಳನ್ನು ತಲುಪಿ ಕನ್ನಡದ ಪ್ರಚಾರದ ಜತೆಗೆ ಅಭಿಮಾನ ಹುಟ್ಟಿಸಲಿದೆ. 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ದಾಖಲೆ ಸಂಖ್ಯೆಯ ಜನಸಮೂಹ ಸೇರಿಸಲಿದ್ದು, 28 ಸಮಿತಿಗಳ ಅಧ್ಯಕ್ಷರು, ಕಸಾಪ ಪದಾಧಿಕಾರಿಗಳು, ಸದಸ್ಯರು ಬಹಳ ಉತ್ಸುಕರಾಗಿದ್ದಾರೆ. ಕರುನಾಡಿಗೆ ಜ್ಞಾನಪೀಠ ಕಿರೀಟ ತಂದುಕೊಟ್ಟ 7 ಕವಿ, ಸಾಹಿತಿ ರತ್ನಗಳಾದ ಕುವೆಂಪು, ದ.ರಾ.ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ.ಕೃ.ಗೋಕಾಕ್, ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ ಅವರ ಭಾವಚಿತ್ರಗಳೊಂದಿಗೆ ಮಂಡ್ಯ ಜಿಲ್ಲೆಯ 7 ತಾಲೂಕಿನ ಸುಂದರ ಪ್ರೇಕ್ಷಣೀಯ ಸ್ಥಳಗಳನ್ನು ಈ ಕನ್ನಡದ ರಥ ಹೊಂದಿದೆ.


ಕ್ಷೇತ್ರದ ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ, ಮಂಡ್ಯ ಶಾಸಕ ಪಿ.ರವಿಕುಮಾರ್ ಗಣಿಗ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ಎಸ್ಪಿ ಪರಶುರಾಮ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಉಪ ವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ನಿಮಿಷಾಂಬ ದೇಗುಲ ಇಒ ಸಿ.ಜಿ.ಕೃಷ್ಣ, ಕನ್ನಡ ಸಾಹಿತ್ಯ ಸಮ್ಮೇಳನದ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು, ಹರ್ಷ ಪೊನ್ನದೊಡ್ಡಿ, ಕಸಾಪ ತಾಲೂಕು ಅಧ್ಯಕ್ಷ ಎಂ.ಬಿ.ಕುಮಾರ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net