ರಾಜಧಾನಿಯಲ್ಲಿ ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ಶುರು

survey1
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಲಯಗಳಲ್ಲಿ ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ಶುರುವಾಗಿದೆ. ಬೀದಿಬದಿ ವ್ಯಾಪಾರಿಗಳ(ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ) ಅಧಿನಿಯಮ ಮತ್ತು ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ(ಜೀವನೋಪಾಯ ಸಂರಣೆ, ಬೀದಿ ಬದಿ ವ್ಯಾಪಾರದ ನಿಯಂತ್ರಣ ಮತ್ತು ಪರವಾನಗಿ) ಯೋಜನೆಯಡಿ ನಡೆಯುತ್ತಿರುವ ಸಮೀಕ್ಷೆ ಕಾರ್ಯಕ್ಕಾಗಿ  600ಕ್ಕೂ ಅಧಿಕ ಗಣತಿದಾರರ ನಿಯೋಜಿಸಲಾಗಿದೆ. ಮೊಬೈಲ್​ ತಂತ್ರಾಂಶದಲ್ಲಿ ನಡೆಯುತ್ತಿರುವ ಸಮೀಕ್ಷೆಯಲ್ಲಿ ಈವರೆಗೆ 1,800 ವ್ಯಾಪಾರಿಗಳನ್ನು ಗುರುತಿಸಲಾಗಿದೆ.

ಸಮೀಕ್ಷೆ ಅನುಸಾರ ಅರ್ಹ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ, ಪ್ರಮಾಣ ಪತ್ರ ವಿತರಣೆ ಮಾಡಲಾಗುತ್ತದೆ. ವಲಯ ಮಟ್ಟದಲ್ಲಿ ಪಟ್ಟಣ ಮಾರಾಟ ಸಮಿತಿ ರಚಿಸಿ, ಬೀದಿ ವ್ಯಾಪಾರಿಗಳ ಯೋಜನೆ ಅನುಷ್ಠಾನಕ್ಕೆ ತರಲಾಗುವುದು. ಬೀದಿ ನಾಟಕ ಮೂಲಕ ಸೌಲಭ್ಯಗಳ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ಬಿಬಿಎಂಪಿಯ ವಿಶೇಷ ಆಯುಕ್ತ ಸುರಳ್ಕರ್​ ವಿಕಾಶ್​ ಕಿಶೋರ್​ ಹೇಳಿದರು.

ಪಾಲಿಕೆಯ ಎಲ್ಲ ವಲಯಗಳಲ್ಲಿ ವ್ಯಾಪಾರ ವಲಯ ಗುರುತಿಸುವ ಕಾರ್ಯ ಮಾಡಲಾಗುತ್ತಿದೆ. ವ್ಯಾಪಾರಿಗಳ ಸಬಲೀಕರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಪಿಎಂ ಸ್ವನಿಧಿ ಮಾತ್ರವಲ್ಲದೆ ಪಾಲಿಕೆಯ ಕಲ್ಯಾಣ ವಿಭಾಗದಿಂದ ವಾಹನ ಖರೀದಿಗೆ ಸಹಾಯಧನ, ಒಂಟಿ ಮನೆ, ಅಮೃತ ಮಹೋತ್ಸವ ಮನೆ ಯೋಜನೆಗೆ ಸಹಾಯಧನ, ಗಂಭೀರ ಸ್ವರೂಪ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ವೈದ್ಯಕಿಯ ವೆಚ್ಚ ಮರು ಪಾವತಿ, ಕೌಶಲ ತರಬೇತಿ, ಮಕ್ಕಳ ಶಿಣಕ್ಕೆ ಶುಲ್ಕ ಮರುಪಾವತಿ ಸೇರಿದಂತೆ ಇತರೆ ಸೌಲಭ್ಯಗಳಿವೆ ಎಂದರು.

ಬೇಕಿರುವ ದಾಖಲೆಯೇನು?

ಪಾಲಿಕೆ ಕಲ್ಯಾಣ ವಿಭಾಗದಿಂದ ನಿಯೋಜಿಸಿರುವ ಗಣತಿದಾರರು ನಡೆಸುವ ಸಮೀಕ್ಷೆ ವೇಳೆ ಬೀದಿಬದಿ ವ್ಯಾಪಾರಿಗಳು ಆಧಾರ್​ ಕಾರ್ಡ್​, ಮತದಾರರ ಗುರುತಿನ ಚೀಟಿ, ಬ್ಯಾಂಕ್​ ಪಾಸ್​ಬುಕ್​, ಪಡಿತರ ಚೀಟಿ, ಕುಟುಂಬ ಸದಸ್ಯರ ಮಾಹಿತಿ, ಸ್ವಯಂ ಘೋಷಣೆ ಪ್ರಮಾಣ ಪತ್ರ ನೀಡಬೇಕು.

ಫಿಎಂ ಸ್ವ-ನಿಧಿ ಯೋಜನೆ ವಿವರ

* 2,12, 305 ಅರ್ಜಿಗಳು ಸಲ್ಲಿಕೆ

* 1,69,415 ಮಂಜೂರಾದ ಅರ್ಜಿ

* 1,31,805 ಸಾಲ ಪಡೆದ ಫಲಾನುಭವಿಗಳು

* 210 ಕೋಟಿ ರೂ.ಮಂಜೂರು

* 196 ಕೋಟಿ ರೂ.ವಿತರಣೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net