ಬೆಂಗೂರಿನಿಂದ ಶಿಫ್ಟ್; ಜಿಲ್ಲಾ ಮಟ್ಟದಲ್ಲಿ ಗ್ರಾಪಂ ಪಿಡಿಒ, ಕಾರ್ಯದರ್ಶಿಗಳ ಪ್ರತಿಭಟನೆ

vidhanasoudha
Published on

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿ ಖಾಲಿ ಉಳಿದಿರುವ ಹುದ್ದೆಗಳ ಭರ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಎರಡು ದಿನ ಬೆಂಗಳೂರಿನಲ್ಲಿ ನಡೆಸಿದ ಪ್ರತಿಭಟನೆ ಈಗ ಜಿಲ್ಲಾ ಹಂತಕ್ಕೆ ವರ್ಗಾವಣೆಗೊಂಡಿದೆ.

ಪಿಡಿಒಗಳ ಜತೆ ಗ್ರಾಪಂ ಕಾರ್ಯದರ್ಶಿ, ಲೆಕ್ಕ ಸಹಾಯಕರು, ಕರ ವಸೂಲಿ ಸಿಬ್ಬಂದಿ ಮತ್ತು ಡೇಟಾ ಎಂಟ್ರಿ ಆಪರೇಟರ್‌ಗಳು ಈ ಪ್ರತಿಭಟನೆಗೆ ಸಾಥ್ ನೀಡಿದ್ದರು.

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಗ್ರಾಪಂ ಸದಸ್ಯರ ಒಕ್ಕೂಟ, ಪಿಡಿಒ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಗ್ರೇಡ್ 1, ಗ್ರೇಡ್ 2 ಕಾರ್ಯದರ್ಶಿಗಳ ಸಂಘ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಸಂಘ, ಡೇಟಾ ಎಂಟ್ರಿ ಅಪರೇಟರ್ ಸಂಘಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರೂ ನೌಕರರು ಪ್ರತಿಭಟನೆಯಿಂದ ಹಿಂದೆ ಸರಿಯಲು ನಿರಾಕರಿಸಿದರು.

ನೌಕರರ ಬೇಡಿಕೆ ನಿರ್ಲಕ್ಷ್ಯ

ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚಾಗಿದ್ದರೂ ಪಂಚಾಯಿತಿ ಸಿಬ್ಬಂದಿ ಸಂಖ್ಯೆ ಹೆಚ್ಚುತ್ತಿಲ್ಲ. ಕೆಲಸದೊತ್ತಡದಿಂದ ಅಧಿಕಾರಿಗಳು, ನೌಕರರು ಬಳಲುತ್ತಿದ್ದಾರೆ. ಮೂರು ವರ್ಷಗಳಿಂದ ಖಾಲಿಯಾಗಿರುವ ಪಿಡಿಒ, ಕಾರ್ಯದರ್ಶಿ ಮತ್ತು ಲೆಕ್ಕ ಪರಿಶೋಧಕರ ಹುದ್ದೆ ಭರ್ತಿ ಮಾಡಿಲ್ಲ. ಹಲವು ಬಾರಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದರೂ ಸ್ಪಂದನೆ ದೊರೆತಿಲ್ಲ ಎಂದು
ನೌಕರರು ಪ್ರತಿಭಟನೆ ನಡೆಸಿದರು.

ಸಿಇಒ ಕಚೇರಿ ಎದುರು ಪ್ರತಿಭಟನೆ

ಸರ್ಕಾರದ ಜತೆ ನಡೆಸಿದ ಸಂಧಾನ ವಿಲವಾಗಿರುವುದರಿಂದ ನೌಕರರು ತಮ್ಮ ತಮ್ಮ ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಸಿಇಒ ಕಚೇರಿ ಎದುರು ಸೋಮವಾರದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

59 ಬೇಡಿಕೆ ಕುರಿತು ಚರ್ಚೆ

ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ 11, ಡೇಟಾ ಎಂಟ್ರಿ ಅಪರೇಟರ್ ಸಂಘದ 26, ದ್ವಿತೀಯ ದರ್ಜೆ ಲೆಕ್ಕ ಸಹಾಯಕರ 5, ಗ್ರೇಡ್ 1 ಮತ್ತು ಗ್ರೇಡ್ 2 ಕಾರ್ಯದರ್ಶಿಗಳ 9, ಪಿಡಿಒಗಳ 8 ಬೇಡಿಕೆಗಳ ಬಗ್ಗೆ ಅಪರ ಮುಖ್ಯ ಕಾರ್ಯದರ್ಶಿಗಳು ಚರ್ಚಿಸಿದರು. ಕೆಲವು ಬೇಡಿಕೆಗಳಿಗೆ ಸ್ಪಂದಿಸಿದರು. ಆದರೆ, ಬಹುತೇಕ ಬೇಡಿಕೆಗಳ ಬಗ್ಗೆ ಪರಿಶೀಲಿಸಲಾಗುವುದು ಎಂಬ ಉತ್ತರ ದೊರೆಯಿತು. ಇದರಿಂದ ಪ್ರತಿಭಟನಾ ನಿರತ ನೌಕರರ ಸಂಘಗಳ ಪ್ರತಿನಿಧಿಗಳು ಬೇಸರಗೊಂಡು ಪ್ರತಿಭಟನೆ ಮುಂದುವರಿಸುವುದಾಗಿ ಹೇಳಿದರು ಎಂದು ಮೂಲಗಳು ತಿಳಿಸಿವೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ನೌಕರರ ಬೇಡಿಕೆ ಬಗ್ಗೆ ಚರ್ಚಿಸಲು ಅ.10 ರಂದು ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ನೌಕರರ ಕೆಲವು ಬೇಡಿಕೆ ಈಡೇರುವ ನಿರೀಕ್ಷೆ ಇದೆ.


*ಅಪರ ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಸಭೆಯಲ್ಲಿ ನಮ್ಮ ಯಾವ ಬೇಡಿಕೆಗಳ ಬಗ್ಗೆಯೂ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ನೋಡುತ್ತೇವೆ, ಮಾಡುತ್ತೇವೆ, ಪರಿಶೀಲಿಸುತ್ತೇವೆ ಎಂಬ ಉತ್ತರ ಮಾತ್ರ ದೊರೆತಿದೆ. ಇದು ನಮ್ಮ ನೌಕರರಲ್ಲಿ ಅತೀವ ಬೇಸರ ಉಂಟು ಮಾಡಿದೆ. ಹಾಗಾಗಿ ಜಿಲ್ಲಾ ಮಟ್ಟದಲ್ಲಿ ಮುಷ್ಕರ ಮುಂದುವರಿಸಲು ನಿರ್ಧರಿಸಿದ್ದೇವೆ.
-ರಾಜು ವಾರದ, ಅಧ್ಯಕ್ಷರು, ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net