

ಮಂಡ್ಯ: ಸಂಸದೆ ಸುಮಲತಾ ನಟೋರಿಯಸ್ ಎಂದು ವಾಗ್ದಾಳಿ ನಡೆಸಿದ ಶಾಸಕ ರವೀಂದ್ರ ಶ್ರೀಕಂಠಯ್ಯ, ಕೆಆರ್‌ಎಸ್ ಡ್ಯಾಂಗೆ ದೃಷ್ಟಿ ನಿವಾರಣೆಗೆ ಪೂಜೆ ಮಾಡಿಸಲು ಮುಂದಾಗಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಸುಮಲತಾ ನಡುವಿಗೆ ವಾಕ್ಸಮರ ತಾರಕಕ್ಕೇರಿದ್ದು, ಎಚ್ಡಿಕೆ ಪರ ಬ್ಯಾಟಿಂಗ್ ಮಾಡುತ್ತಿರುವ ರವೀಂದ್ರ ಶ್ರೀಕಂಠಯ್ಯ, ಸುಮಲತಾ ವಿರುದ್ಧ ಗುರುವಾರವೂ ವಾಗ್ದಾಳಿ ಮುಂದುವರಿಸಿದರು.
ಕೆಆರ್‌ಎಸ್ ಅಣೆಕಟ್ಟೆ ಬಿರುಕುಬಿಟ್ಟಿದೆ ಎಂದು ಸುಮಲತಾ ಪದೇಪದೆ ಹೇಳಿದ್ದಾರೆ. ಇದರಿಂದ ಕೆಆರ್‌ಎಸ್ ಅಣೆಕಟ್ಟೆಗೆ ದೃಷ್ಟಿ ಆಗಿದೆ. ದೃಷ್ಟಿ ನಿವಾರಣೆ ಮಾಡಲು ಪೂಜೆ ಮಾಡಿಸಬೇಕು ಎಂದ ರವೀಂದ್ರ ಶ್ರೀಕಂಠಯ್ಯ, ಅದಕ್ಕಾಗಿ ಮುಹೂರ್ತ ಫಿಕ್ಸ್ ಮಾಡುವ ತಯಾರಿಯಲ್ಲಿದ್ದಾರೆ.
ನಾನು ಮೊದಲಿನಿಂದಲೂ ಡ್ಯಾಂ ಸುರಕ್ಷತವಾಗಿದೆ ಅಂತ ಹೇಳುತ್ತಲೇ ಇದ್ದೇನೆ. ಸುಮಲತಾ ಅವರು ಬಿರುಕು ಇದೆ ಅಂತ ಯಾವ ಆಧಾರದ ಮೇಲೆ ಹೇಳುತ್ತಿದ್ದಾರೆ? ದೇಶದ ಗೌಪ್ಯತೆ ಕಾಪಾಡುತ್ತೇನೆ ಅಂತ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ನ್ಯಾಷನಲ್ ಪ್ರಾಪರ್ಟಿ ಬಗ್ಗೆ ಅದ್ಹೇಗೆ ಬಹಿರಂಗ ಹೇಳಿಕೆ ನೀಡುತ್ತೀರಿ? ನಿಮ್ಮ ಹೇಳಿಕೆಯನ್ನು ಆ್ಯಂಟಿ ಎಲಿಮೆಂಟ್‌ಗಳು ದುರ್ಬಳಕೆ ಮಾಡಿಕೊಳ್ಳಲ್ವ? ನೀವು ದೇಶ ದ್ರೋಹ ಮಾಡಿದ್ದೀರಿ. ಡ್ಯಾಂ ಸುರಕ್ಷತೆ ಬಗ್ಗೆ ಹೇಳಿಕೆ ನೀಡುವ ಅಧಿಕಾರವನ್ನು ನಿಮಗೆ ಕೊಟ್ಟವರು ಯಾರು? ನೀವೇನ್ ಪ್ರಧಾನ ಮಂತ್ರಿನಾ, ಮುಖ್ಯಮಂತ್ರಿನಾ? ಎಂದು ಪ್ರಶ್ನಿಸಿದ್ದಾರೆ.
ನಿಮ್ಮ ಎಡಬಲದಲ್ಲಿ ಇದ್ದವರನ್ನು ಹೋಟೆಲ್‌ಗೆ ಯಾಕೆ ಕಳುಹಿಸಿದ್ರಿ? ಬೆಂಗಳೂರಿನ ಸ್ಟಾರ್ ಹೋಟೆಲ್‌ನಲ್ಲಿ ಯಾರ ಜತೆಗೆ ನಿಮ್ಮ ಬ್ರೋಕರ್‌ಗಳು ಏನು ಮಾತನಾಡಿದ್ರು ಅಂತ ಗೊತ್ತಿದೆ. ನನ್ನ ಬಳಿಯೂ ದಾಖಲೆಗಳಿವೆ, ಮುಂದಿನ ದಿನಗಳಲ್ಲಿ ನಾನೂ ಮಾತನಾಡುತ್ತೇನೆ ಎಂದು ರವೀಂದ್ರ ಶ್ರೀಕಂಠಯ್ಯ ಬಾಂಬ್ ಸಿಡಿಸಿದರು.
ಅಂಗರಹಳ್ಳಿಯಲ್ಲಿ ಅಕ್ರಮ ಗಣಿಗಾರಿಕೆ ಆಗಿರೋದು ಅಂಬರೀಷ್ ಸಂಸದರಾಗಿದ್ದ ಕಾಲದಲ್ಲಿ. 2007ರ ವರೆಗೂ ಅಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆದಿದೆ. ಅಕ್ರಮವಾಗಿ ಗಣಿ ಮಾಡಿದವರು ಅಂಬರೀಷ್ ಬೆಂಬಲಿಗರು. ಸಂಸದರಾಗಿದ್ದ ಅಂಬರೀಷ್ ಅಲ್ಲಿಗೆ ಭೇಟಿ ನೀಡಿ ಹಳ್ಳಕೊಳ್ಳಗಳನ್ನೂ ಪರಿಶೀಲಿಸಿದ ವಿಡಿಯೋ ನನ್ನ ಬಳಿ ಇದೆ ಎಂದು ಮತ್ತೊಂದು ಬಾಂಬ್ ಸಿಡಿಸಿದರು.
ಜೆಡಿಎಸ್‌ನಲ್ಲೂ ರಾಜಕೀಯ ಮಿಸೈಲ್‌ಗಳಿವೆ. ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ ನಮ್ಮ ಮಿಸೈಲ್. ಇಂತಹ ಹಲವು ಮಿಸೈಲ್ ನಮ್ಮ ಪಕ್ಷದಲ್ಲಿವೆ. ಸಂದರ್ಭ ಬಂದಾಗ ಪ್ರಯೋಗ ಮಾಡುತ್ತೇವೆ ಎಂದು ನಾನು ಹೇಳಿದ್ದೆ. ಅದನ್ನೇ ಸುಮಲತಾ ತಮ್ಮ ಅನುಕೂಲಕ್ಕೆ ತಿರುಚಿಕೊಂಡಿದ್ದಾರೆ. ಇಷ್ಟು ನಟೋರಿಯಸ್ ಬುದ್ಧಿ ಇರುವವರಿಗೆ ಏನು ಹೇಳೋದು? ಎಂದು ಆಕ್ರೋಶ ಹೊರಹಾಕಿದರು.