

ಉಳ್ಳಾಲ(ಮಂಗಳೂರು): ನರಿಂಗಾನ ಗ್ರಾಮದ ಮೊಂಟೆಪದವು ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಒಂಬತ್ತನೇ ತರಗತಿಯ ಇಬ್ಬರು ವಿದ್ಯಾರ್ಥಿಗಳ ಮಧ್ಯೆ ಸಾಂಬಾರು ವಿಷಯಕ್ಕೆ ಜಗಳ ನಡೆದಿದ್ದು, ಈ ವೇಳೆ ವಿದ್ಯಾರ್ಥಿಯೋರ್ವ ಇನ್ನೊಬ್ಬ ವಿದ್ಯಾರ್ಥಿ ಮೇಲೆ ಚೂರಿ ಎಸೆದು ಗಾಯಗೊಳಿಸಿದ್ದಾನೆ.
ಘಟನೆ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಧ್ಯಾಹ್ನ ಊಟದ ಹೊತ್ತಿನಲ್ಲಿ ಒಬ್ಬ ವಿದ್ಯಾರ್ಥಿಯ ತಟ್ಟೆಯಿಂದ ಸಾಂಬಾರು ಚೆಲ್ಲಿ ಇನ್ನೊಬ್ಬ ವಿದ್ಯಾರ್ಥಿಯ ಬಟ್ಟೆಗೆ ಬಿದ್ದಿತ್ತು. ಬಟ್ಟೆಯಲ್ಲಿ ಕಲೆ ಆಯಿತೆಂದು ಕೆರಳಿದ ವಿದ್ಯಾರ್ಥಿ ಸಾಂಬಾರು ಚೆಲ್ಲಿದ ವಿದ್ಯಾರ್ಥಿಗೆ ಕಪಾಳ ಮೋಕ್ಷ ಮಾಡಿದ್ದಾನೆ. ಈ ಸಂದರ್ಭ ಪೆಟ್ಟು ತಿಂದ ವಿದ್ಯಾರ್ಥಿ ಬ್ಯಾಗ್‌ನಿಂದ ಚೂರಿ ತೆಗೆದು ತನಗೆ ಹೊಡೆದ ವಿದ್ಯಾರ್ಥಿಯ ಮೇಲೆ ಎಸೆದಿದ್ದಾನೆ. ಚೂರಿ ಎದೆಯ ಪಕ್ಕ ಬಡಿದು ಗಾಯವಾಗಿದೆ. ಗಾಯಗೊಂಡ ವಿದ್ಯಾರ್ಥಿಯನ್ನು ತಕ್ಷಣ ಉಪ ಪ್ರಾಂಶುಪಾಲರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಘಟನೆ ಮಾಹಿತಿ ಪಡೆದ ದಕ್ಷಿಣ ಉಪ ವಿಭಾಗ ಎಸಿಪಿ ಧನ್ಯಾ ಎನ್.ನಾಯಕ್, ಕೊಣಾಜೆ ಇನ್‌ಸ್ಪೆಕ್ಟರ್ ಸಹಿತ ಅಧಿಕಾರಿಗಳು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಭೇಟಿ ನೀಡಿ ಹುಡುಗನಿಗೆ ಬುದ್ಧಿ ಹೇಳಿ ಮನೆಗೆ ಕಳುಹಿಸಿದ್ದರು. ಘಟನೆಯ ಬಗ್ಗೆ ಅಧಿಕಾರಿಗಳು ಮಕ್ಕಳ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ವಿದ್ಯಾರ್ಥಿ ಶಾಲೆಗೆ ಬರುವಾಗ ಚೂರಿ ತಂದಿರುವುದನ್ನು ಗಮನಿಸಿದಾಗ ಇಬ್ಬರು ಹುಡುಗರ ನಡುವೆ ಮೊದಲೇ ವೈಷಮ್ಯ ಇದ್ದಿರಬಹುದಾದ ಸಾಧ್ಯತೆಯನ್ನು ಶಂಕಿಸಲಾಗಿದೆ.