ನುಡಿದಂತೆ ನಡೆಯದ ರಾಜ್ಯ ಸರ್ಕಾರ

oppo_2
ಮದ್ದೂರು ಪಟ್ಟಣದ ಗುರುಭವನದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಭೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಬಿ.ಎಸ್.ಮಹೇಶ್‌ಕುಮಾರ್ ಮಾತನಾಡಿದರು. ಪ್ರಭು, ವಿಜಯ್‌ಕುಮಾರ್, ಜೆ.ಶಿವಕುಮಾರ್, ಸಿ.ಮಹೇಶ ಇದ್ದರು.
Published on

ಮದ್ದೂರು: ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ವಿಚಾರದಲ್ಲಿ ರಾಜ್ಯ ಸರ್ಕಾರ ನುಡಿದಂತೆ ನಡೆದುಕೊಳ್ಳುತ್ತಿಲ್ಲ ಎಂದು ಸಂಘದ ಜಿಲ್ಲಾಧ್ಯಕ್ಷ ಬಿ.ಎಸ್.ಮಹೇಶ್‌ಕುಮಾರ್ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಗುರುಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಅತಿಥಿ ಶಿಕ್ಷಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಜೆಟ್‌ನಲ್ಲೂ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದೆ ಇರುವುದು ಅತಿಥಿ ಶಿಕ್ಷಕರಿಗೆ ನೋವು ತರಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸರ್ಕಾರ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಅತಿಥಿ ಶಿಕ್ಷಕರಿಗೆ ವೇತನವನ್ನು ಕೇವಲ ಎರಡು ಸಾವಿರ ರೂಪಾಯಿ ಹೆಚ್ಚಳ ಮಾಡಲಾಗಿದೆ. ಶಿಕ್ಷಣ ಸಚಿವರು ಪ್ರಾಥಮಿಕ ಶಾಲೆಗಳಿಗೆ 15 ಸಾವಿರ ರೂ., ಪ್ರೌಢಶಾಲೆಗಳಿಗೆ 16 ಸಾವಿರ ರೂ. ಗೌರವಧನ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ನುಡಿದಂತೆ ನಡೆದಿರುವುದಿಲ್ಲ. ಈಗ ಕೇವಲ 12,500 ರೂ. ವೇತನ ಬರುತ್ತಿದೆ. ಇದರಿಂದ ಜೀವನ ನಡೆಸುವುದು ಕಷ್ಟ ಎಂದರು.

ಸರ್ಕಾರದ ಈ ಧೋರಣೆಯನ್ನು ಖಂಡಿಸುತ್ತೇವೆ. ಗೌರವಧನದ ಬದಲಿಗೆ ಕನಿಷ್ಠ ವೇತನ 31 ಸಾವಿರ ರೂಪಾಯಿ ನೀಡಬೇಕು. ಪ್ರಣಾಳಿಕೆಯಲ್ಲಿ ಹೇಳಿರುವಂತೆ ಅತಿಥಿ ಶಿಕ್ಷಕರನ್ನು ಕಾಯಂ ಮಾಡಬೇಕು. ಸೇವಾ ಭದ್ರತೆ ನೀಡಬೇಕು. ಸೇವಾ ಹಿರಿತನಕ್ಕೆ ಆಧ್ಯತೆ ನೀಡಬೇಕು, ಅಂಗವಿಕಲ ಶಿಕ್ಷಕರಿಗೆ ಮೀಸಲಾತಿ ನೀಡಬೇಕು. ವರ್ಷಕ್ಕೆ 5 ರಷ್ಟು ಕೃಪಾಂಕ ನೀಡಬೇಕು.

ಸೇವಾ ದೃಢೀಕರಣ ಪತ್ರ ನೀಡಬೇಕು. ಆರೋಗ್ಯ ವಿಮೆ ನೀಡಬೇಕು. ಈ ವಿಚಾರಗಳಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಜಾಣ ಕುರುಡರಾಗಿದ್ದಾರೆ. ಅಧಿಕೃತ ಆದೇಶ ಹೊರಡಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ನಮ್ಮ ಹಕ್ಕೊತ್ತಾಯಗಳನ್ನು ಬೇಡಿಕೆಗಳನ್ನು ನೆರವೇರಿಸದಿದ್ದಲ್ಲಿ ರಾಜ್ಯಾದ್ಯಂತ ಶಾಲೆ ತೊರೆದು ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಕಾಯಂ ಶಿಕ್ಷಕರಂತೆ ಅತಿಥಿ ಶಿಕ್ಷಕರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದು, ಕಾನೂನು ಬದ್ಧವಾಗಿ ನಮಗೆ ನೀಡಬೇಕಾಗಿರುವ ವೇತನ ನೀಡಬೇಕು. ಈ ವಿಷಯದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಜಿಲ್ಲೆಯ ಅತಿಥಿ ಶಿಕ್ಷಕರಿಗಾಗುತ್ತಿರುವ ಅನ್ಯಾಯಗಳ ಬಗ್ಗೆ ಮಾತನಾಡುತ್ತಿಲ್ಲ, ಇದೇ ಹೀಗೆ ಮುಂದುವರಿದರೆ ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ರಾಷ್ಟ್ರೀಯ ಪಕ್ಷಗಳಾಗಲಿ ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸದೆ ನೋಟಾಗೆ ಮತ ನೀಡಬೇಕಾಗುತ್ತದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಸಂಘದ ತಾಲೂಕು ಅಧ್ಯಕ್ಷ ಪ್ರಭು ಮಾತನಾಡಿ, ಸರ್ಕಾರದ ಈ ನಡೆ ನೋವನ್ನು ಉಂಟು ಮಾಡಿದೆ. ಶಿಕ್ಷಣ ಸಚಿವರು ನುಡಿದಂತೆ ನಡೆದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ಮಾತನಾಡಿ, ಮುಖ್ಯಮಂತ್ರಿ ನಮ್ಮ ಬಗ್ಗೆ ಗಮನ ಹರಿಸಬೇಕು ನಮ್ಮ ಬೇಡಿಕೆಗಳನ್ನು ನೆರವೇರಿಸಬೇಕು, ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಶಾಲೆ ತೊರೆದು ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಂಘದ ತಾಲೂಕು ಅಧ್ಯಕ್ಷ ಪ್ರಭು, ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಜೆ.ಶಿವಕುಮಾರ್. ತಾಲೂಕು ಉಪಾಧ್ಯಕ್ಷ ಸಿ.ಮಹೇಶ, ಪದಾಧಿಕಾರಿಗಳಾದ ಹರೀಶ್, ಕಾರ್ತಿಕ್, ರವಿಕುಮಾರ್, ಮಹೇಶ್. ಶ್ವೇತಾ, ಸುನೀತ, ರಮ್ಯಾ, ಸುಮಲತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net