ನಾಳೆಯಿಂದ ಎಸ್ಸೆಸ್ಸೆಲ್ಸಿ ಎಕ್ಸಾಂ: ಆತಂಕ ಬೇಡ... ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಶಿಕ್ಷಣ ಸಚಿವ ನಾಗೇಶ್​

bc nagesh
Published on

ಬಾಗಲಕೋಟೆ: ನಾಳೆಯಿಂದ(ಮಾ.28) ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಾರಂಭವಾಗಲಿದ್ದು, ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್​ ಧೈರ್ಯ ತುಂಬಿದ್ದಾರೆ.

ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದ 3,444 ಕೇಂದ್ರಗಳಲ್ಲಿ 48 ಸಾವಿರ ಕೊಠಡಿಗಳಲ್ಲಿ ವ್ಯವಸ್ಥಿತವಾಗಿ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಶೇ.80 ಪಠ್ಯ ಮುಗಿದಿದೆ. ಪಾಠದಲ್ಲಿರುವ ವಿಷಯಕ್ಕೆ ಸಂಬಧಿಸಿದ್ದೇ ಪ್ರಶ್ನೆ ಪತ್ರಿಕೆ ಬರುತ್ತದೆ. ಅಲ್ಲದೆ, ಈ ಬಾರಿ ಪ್ರಶ್ನೆ ಪತ್ರಿಕೆಯಲ್ಲಿ ಆಯ್ಕೆಗಳನ್ನು ಹೆಚ್ಚು ನೀಡಲಾಗುತ್ತದೆ. ಪಠ್ಯ ಮುಗಿಯದೇ ಇರುವ ಶಾಲೆಯ ವಿದ್ಯಾರ್ಥಿಗಳು ಬೇರೆ ಪ್ರಶ್ನೆ ಆಯ್ಕೆ ಮಾಡುವ ವಿಶ್ವಾಸವಿದೆ. ಹಾಗಾಗಿ ಧೈರ್ಯವಾಗಿ ವಿದ್ಯಾಥಿರ್ಗಳು ಪರೀಕ್ಷೆ ಬರೆಯಬೇಕು ಎಂದರು.

ಹಿಜಾಬ್​ ವಿಚಾರ ಸುಪ್ರೀಂ ಕೋರ್ಟ್​ನಲ್ಲಿ ಇದೆ. ಹೈಕೋರ್ಟ್​ ಅಂತಿಮ ತೀರ್ಪು ಕೊಟ್ಟಿದ್ದು, ನಮ್ಮ ಸರ್ಕಾರದ ನೋಟಿಫಿಕೇಶನ್​ ಎತ್ತಿ ಹಿಡಿದಿದೆ. ಶಾಲೆಯ ಕ್ಲಾಸ್​ ರೂಮ್​ಗಳಲ್ಲಿ ಸಮವಸ್ತ್ರ ಕಡ್ಡಾಯ. ಕರ್ನಾಟಕ ಶಿಕ್ಷಣ ಕಾಯ್ದೆ ಪ್ರಕಾರ ಸಮವಸ್ತ್ರದಲ್ಲಿ ಯಾವುದೇ ಧಾರ್ಮಿಕ ವಸ್ತ್ರ ಇರಬಾರದು. ಹೀಗಾಗಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಆಯಾ ಶಾಲೆಗಳು ನಿಗದಿ ಪಡಿಸಿದ ಸಮವಸ್ತ್ರ ಧರಿಸಿ ಬರುವುದು ಕಡ್ಡಾಯ. ಆದರೆ, ಬಾಹ್ಯ ಹಾಗೂ ರಿಪೀಟರ್ಸ್​​ ಪರೀಕ್ಷಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ ಇಲ್ಲ ಎಂದು ಶಿಕ್ಷಣ ಸಚಿವರು ವಿವರಿಸಿದರು.

ಹಿಜಾಬ್​ ಧರಿಸಿ ಶಾಲೆವರೆಗೂ ಬರಬಹುದು, ಕ್ಲಾಸ್​ ರೂಂ ಒಳಗೆ ಹೋಗುವಂತಿಲ್ಲ. ಯಾರಾದ್ರೂ ಬೆದರಿಕೆ ಹಾಕಿದರೆ ಕಾನೂನು ಕ್ರಮ ನಿಶ್ಚಿತ. ಅಂತಹ ಘಟನೆ ನಡೆದರೆ ಬಿಇಒಗಳು ದೂರು ಕೊಡುತ್ತಾರೆ. ಪರೀಕ್ಷೆಗೆ ಗೈರಾದವರಿಗೆ ಪೂರಕ ಪರೀಕ್ಷೆ ಇರುತ್ತದೆ ಎಂದು ಸಚಿವ ನಾಗೇಶ್​ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net