ಶ್ರೀರಂಗಪಟ್ಟಣ ದಸರಾಗೆ ಚಾಲನೆ: ನಾಡಹಬ್ಬದ ಸಂಭ್ರಮ ಹೆಚ್ಚಿಸಿದ ಪಾರಂಪರಿಕ ಜಂಬೂಸವಾರಿ

srirangapattana dasara
Published on

ಶ್ರೀರಂಗಪಟ್ಟಣ: ಐದು ದಿನಗಳ ಕಾಲ ನಡೆಯುವ ಶ್ರೀರಂಗಪಟ್ಟಣ ಪಾರಂಪರಿಕ ದಸರಾಗೆ ಇಂದು(ಸೆ.28) ಮಧ್ಯಾಹ್ನ ಕಿರಂಗೂರು ಬನ್ನಿಮಂಟಪದಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಜಂಬೂಸವಾರಿಗೆ ಮೆರವಣಿಗೆಗೆ ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಸಂಜೆ 4:05ರ ಶುಭ ಕುಂಭಲಗ್ನದಲ್ಲಿ ಚಾಲನೆ ನೀಡಿದ್ದು, ನಾಡಹಬ್ಬದ ಸಡಗರ ಎಲ್ಲೆಡೆ ಮೇಳೈಸಿದೆ.

ಚಾಮುಂಡೇಶ್ವರಿ ಉತ್ಸವ ಮೂರ್ತಿ ಇರುವ ಮರದ ಅಂಬಾರಿ ಹೊತ್ತು ಸಾಗಿದ ಆನೆ ಮಹೇಂದ್ರಗೆ ವಿಜಯ ಮತ್ತು ಕಾವೇರಿ ಆನೆಗಳು ಸಾಥ್​ ನೀಡಿವೆ. ಜಂಬೂಸವಾರಿಗೆ ಜಾನಪದ ಕಲಾವಿದರು ಮೆರುಗು ನೀಡುತ್ತಿದ್ದಾರೆ. ಡೊಳ್ಳುಕುಣಿತ, ವೀರಗಾಸೆ, ಪಟದ(ದೇವರ)ಕುಣಿತ, ಪೂಜಾಕುಣಿತ, ಕೋಲಾಟ ಸೇರಿದಂತೆ ಸ್ಥಳೀಯ ಕಲಾತಂಡಗಳು ಭಾಗವಹಿಸಿದ್ದು, ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಪಟ್ಟಣದ ರಂಗನಾಥಸ್ವಾಮಿ ದೇವಾಲಯ ಮೈದಾನದ ಶ್ರೀರಂಗ ಬೃಹತ್​ ವೇದಿಕೆಯತ್ತ ಸಾಗಿತು. ಸಹಸ್ರಾರು ಜನ ಜಂಬೂಸವಾರಿಯನ್ನ ಕಣ್ತುಂಬಿಕೊಂಡರು.

ರೈತ ದಸರಾ, ಮಹಿಳಾ ದಸರಾ, ಸಾಂಸ್ಕೃತಿಕ, ಯುವ, ಉದ್ಯೋಗ, ಕ್ರೀಡಾ, ಸಾಹಿತ್ಯ, ಮಕ್ಕಳ ಹಾಗೂ ಯೋಗ ದಸರಾ ಸೇರಿದಂತೆ ಹಲವು ವಿಶೇಷತೆಗಳಿವೆ. ದಸರಾ ಹಬ್ಬದ ಮೊದಲ ದಿನದ ಕಾರ್ಯಕ್ರಮವಾಗಿ ಇಂದು(ಸೆ.28) ಸಂಜೆ 6.30ಕ್ಕೆ ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ನಿರ್ಮಿಸಿರುವ ಶ್ರೀರಂಗ ವೇದಿಕೆಯಲ್ಲಿ ಸಂಗೀತ ರಸಸಂಜೆ ನಡೆಯಲಿದೆ. ಚಲನಚಿತ್ರ ನಟ, ನಟಿಯರು, ಗಾಯಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಇದರೊಟ್ಟಿಗೆ ಸ್ಥಳೀಯ ಪ್ರತಿಭೆಗಳಿಂದ ಕಲಾ ಪ್ರದರ್ಶನವಿರಲಿದೆ. ಇದಕ್ಕೂ ಮುನ್ನ ವೇದಿಕೆ ಕಾರ್ಯಕ್ರಮವನ್ನು ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ಕಂದಾಯ ಸಚಿವ ಆರ್​.ಅಶೋಕ್​ ಉದ್ಘಾಟಿಸಲಿದ್ದಾರೆ. ಶಾಸಕ ಎ.ಎಸ್​.ರವೀಂದ್ರ ಶ್ರೀಕಂಠಯ್ಯ ಅಧ್ಯಕ್ಷತೆ ವಹಿಸಲಿದ್ದು, ಹಬ್ಬದ ಕುರಿತು ಸಚಿವ ಕೆ.ಗೋಪಾಲಯ್ಯ ಮಾತನಾಡಲಿದ್ದಾರೆ.

ಅಂತೆಯೇ ದಸರಾ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಇಂದು ಸಂಜೆ 5ಕ್ಕೆ ಶ್ರೀರಂಗಪಟ್ಟಣ ತಾಲೂಕು ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಆಯೋಜಿಸಿದೆ. 29ರಂದು ಬೆಳಗ್ಗೆ 7ಕ್ಕೆ ಕರೀಘಟ್ಟ ದೇವಸ್ಥಾನದ ಪಾದದಿಂದ ಮೇಲ್ಭಾಗದವರೆಗೆ ಚಾರಣ, 9.30ಕ್ಕೆ ಶ್ರೀರಂಗಪಟ್ಟಣ ತಾಲೂಕು ಕ್ರೀಡಾಂಗಣದಲ್ಲಿ ವಾಲಿಬಾಲ್​ ಮತ್ತು ಖೋ ಖೋ ಪಂದ್ಯಾವಳಿ ಏರ್ಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net