

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಕುರಿತು ವಿವಾದ ಭುಗಿಲೆದ್ದಿದ್ದು, ಶನಿವಾರ ಬೆಳಗ್ಗೆಯೇ ನೂರಾರು ಹಿಂದು ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ್ದು, ಜೈ ಶ್ರೀರಾಮ್ ಘೋಷಣೆ ಕೂಗುತ್ತಿದ್ದಾರೆ. ವಿಶ್ವ ಹಿಂದು ಪರಿಷತ್ ವತಿಯಿಂದ ಶ್ರೀರಂಗಪಟ್ಟಣ ಚಲೋ ಕಾರ್ಯಕ್ರಮ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಪಟ್ಟಣದಾದ್ಯಂತ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜೂ.5ರ ಮುಂಜಾನೆ 6ಗಂಟೆವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮೆರವಣಿಗೆ ಕೈಬಿಟ್ಟ ಹಿಂದೂ ಸಂಘಟನೆಗಳು ಹನುಮಾನ್ ಚಾಲೀಸಾ ಪಠಣೆಗೆ ನಿರ್ಧರಿಸಿವೆ. ಶ್ರೀರಂಗಪಟ್ಟಣದಲ್ಲಿ ಕಾರ್ಯಕರ್ತರು ಜಮಾವಣೆಗೊಂಡಿದ್ದರಿಂದ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ನಾವು ಶ್ರೀರಂಗಪಟ್ಟಣ ಚಲೋ ಕೈ ಬಿಟ್ಟಿಲ್ಲ. ಮೆರವಣಿಗೆಯನ್ನು ಕೈ ಬಿಟ್ಟಿದ್ದೇವೆ. ಮೆರವಣಿಗೆ ಬಿಟ್ಟು ಬನ್ನಿಮಂಟಪದಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡುತ್ತೇವೆ ಎಂದು ಹಿಂದೂ ಮುಖಂಡ ಸುನೀಲ್ ಹೇಳಿದ್ದಾರೆ. ಶ್ರೀರಂಗಪಟ್ಟಣ ಪಟ್ಟಣದ ಜಾಮಿಯಾ ಮಸೀದಿ ಕುರಿತು ವಿವಾದ ಭುಗಿಲೆದ್ದಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪಟ್ಟಣಕ್ಕೆ ಪೊಲೀಸ್ ಸರ್ಪಗಾವಲು ಇಡಲಾಗಿದೆ. ಡಿವೈಎಸ್ಪಿ ಸಂದೇಶಕುಮಾರ್ ಅವರ ನೇತೃತ್ವದಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಮೂವರು ಸಿಪಿವೈ, 6 ಪಿಎಸ್ಐ, 200 ಕಾನ್ಸ್ಟೆಬಲ್, 2 ಕೆಎಸ್ಆರ್ಪಿ, 4 ಡಿಎಆರ್ ತುಕಡಿ ಸೇರಿದಂತೆ 500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ಬೆಂಗಳೂರು-ಮೈಸೂರು ಹೆದ್ದಾರಿಯ ಕಿರಂಗೂರು ಬನ್ನಿಮಂಟಪ ವೃತ್ತದಿಂದ ನಿಮಿಷಾಂಬ ವೃತ್ತ, ಬನ್ನೂರು-ಶ್ರೀರಂಗಪಟ್ಟಣ ವೃತ್ತ, ಪಶ್ಚಿಮವಾಹಿನಿಯ ಮೈಸೂರು-ಬೆಂಗಳೂರು ವೃತ್ತ, ಶ್ರೀರಂಗಪಟ್ಟಣ ರೈಲ್ವೇ ನಿಲ್ದಾಣ, ಪೂರ್ವ ಪಶ್ಚಿಮವಾಹಿನಿಯ ಕೆಆರ್ಎಸ್-ಶ್ರೀರಂಗಪಟ್ಟಣ ವೃತ್ತ ಸೇರಿದಂತೆ ಇತತರ ಕಡೆ ಬ್ಯಾರಿಕೇಡ್ ಅಳವಡಿಸಿ ಕ್ಯಾಮರಾ ಕಣ್ಗಾವಲಿನೊಂದಿಗೆ ಹೆಚ್ಚುವರಿಯಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಇನ್ನು ರ್ನಿಬಂಧಿತ ಪ್ರದೇಶದಲ್ಲಿ 5ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ನಿಷೇಧಾಜ್ಞೆ ಅವಧಿಯಲ್ಲಿ ಯಾವುದೇ ಧ್ವನಿವರ್ಧಕ ಬಳಸುವಂತಿಲ್ಲ. ಮಾರಾಕಾಸ್ತ್ರ ಹಿಡಿದು ತಿರುಗಾಡುವುದು, ಪ್ರಚೋದನಕಾರಿ ಭಾಷಣ, ಉದ್ರೇಕಕಾರಿ ಹೇಳಿಕೆ ನೀಡಿ ಕೋಮು ಪ್ರಚೋದನೆ ಮೂಲಕ ಸಾಮರಸ್ಯ ಕದಡುವುದು ಕಂಡುಬಂದಲ್ಲಿ ಸ್ಥಳದಲ್ಲೇ ಬಂಧಿಸಿ ಕಠಿಣ ಕ್ರಮಕ್ಕೆ ಸೂಚಿಸಲಾಗಿದೆ. ಇದರೊಂದಿಗೆ ಬಾರ್, ರೆಸ್ಟೋರೆಂಟ್ ಬಂದ್ ಮಾಡಲಾಗಿದೆ.