

ತಾಳಗುಪ್ಪ(ಶಿವಮೊಗ್ಗ): ಪುಸ್ತಕದಲ್ಲಿ ಹಾವಿನ ಚಿತ್ರ, ಹಾವಿನ ಕುರಿತ ಮಾಹಿತಿ ಇರೋದನ್ನು ನೋಡಿದ್ದೇವೆ... ಓದಿದ್ದೇವೆ. ಇನ್ನು ನಿಜವಾದ ಹಾವು ಪುಸ್ತಕದೊಳಗೇ ಕಂಡರೆ..! ಅಬ್ಬಾ, ಬೆಚ್ಚಿಬೀಳೋರೇ ಹೆಚ್ಚು.
ಇಂತಹ ಘಟನೆ ಶಿವಮೊಗ್ಗದ ಸಾಗರ ತಾಲೂಕು ತಲವಾಟದ ಮನೆಯೊಂದರಲ್ಲಿ ನಡೆದಿದೆ. ಟೇಬಲ್ ಮೇಲೆ ಇಟ್ಟಿದ್ದ ಪುಸ್ತಕದೊಳಗೆ ಹಾವು ಪತ್ತೆಯಾಗಿದೆ. ಟೇಬಲ್ ಸ್ವಚ್ಛ ಮಾಡಲು ಬಂದ ಮನೆಯ ಗೃಹಿಣಿ ವಿದ್ಯಾ, ಅಲುಗಾಡುತ್ತಿದ್ದ ಪುಸ್ತಕ ಕಂಡು ಅನುಮಾನಗೊಂಡು ನೋಡಿದಾಗ ಕಪ್ಪು ಬಣ್ಣದ ಅರಿಶಿಣ ಪಟ್ಟೆಯುಳ್ಳ ಕಟ್ಟಿಗೆ ಹಾವು (ಯೆಲ್ಲೋ ಸ್ಪಾಟೆಡ್ ವೂಲ್ಫ್ ಸ್ನೇಕ್) ಕಂಡುಬಂದಿದೆ.
ಮನೆಯವರು ಒಮ್ಮೆ ಗಾಬರಿಗೊಂಡರಾದರೂ ನಂತರ ಉರುಗ ಪ್ರೇಮಿಗಳನ್ನು ಕರೆಸಿ ಹಾವನ್ನು ಹಿಡಿದು ಕಾಡಿಗೆ ಬಿಡಿಸಿದರು. ಪಶ್ಚಿಮಘಟ್ಟಗಳಲ್ಲಿ ಮಳೆಗಾಲದ ವೇಳೆ ಬೆಚ್ಚನೆಯ ತಾಣ ಹುಡುಕಿಕೊಂಡು ಹಾವುಗಳು ಮನೆಯೊಳಗೆ ಬರುವುದುಂಟು. ಇವು ವಿಷರಹಿತ ಹಾವಾಗಿದ್ದರೂ ಕಚ್ಚಿದರೆ ಊತ ಬರುತ್ತದೆ ಎಂದು ಉರಗ ಪ್ರೇಮಿ ಗಿರಿಧರ ಕಲಗಾರು ತಿಳಿಸಿದರು.