

ಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಸಾ.ರಾ.ಮಹೇಶ್ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ತಮ್ಮ ವಿರುದ್ಧ ಭೂ ಕಬಳಿಕೆ ಆರೋಪ ಮಾಡಿ ರೋಹಿಣಿ ಸಿಂಧೂರಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರಿಂದ ನಗರದ ಎರಡನೇ ಜಿಲ್ಲಾ ಸೆಷನ್ಸ್ ನ್ಯಾಯಲಯದಲ್ಲಿ 1 ಕೋಟಿ ರೂ. ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ನನ್ನ ವಿರುದ್ಧ ರೋಹಿಣಿ ಸಿಂಧೂರಿ ಭೂಕಬಳಿಕೆ ಆರೋಪ ಮಾಡಿದ್ದರು. ಆದರೆ ತನಿಖೆ ನಡೆಸಿದ ಪ್ರಾದೇಶಿಕ ಆಯುಕ್ತರು ಆರೋಪ ಸುಳ್ಳೆಂದು ವರದಿ ನೀಡಿದ್ದರು. ಹೀಗಾಗಿ, ರೋಹಿಣಿ ಅವರ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದೆ. ಅದರಂತೆ, ಸಿವಿಲ್ ಮತ್ತು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾವೆ ಹೂಡಿದ್ದೇನೆ ಎಂದು ತಿಳಿಸಿದರು.
ವಕೀಲ ಅರುಣ್ಕುಮಾರ್ ಮಾತನಾಡಿ, ಸಾ.ರಾ.ಮಹೇಶ್ ಭೂ ಕಬಳಿಕೆ ಮಾಡಿದ್ದು, ಜೈಲಲ್ಲಿ ಇರುತ್ತಾರೆಂದು ರೋಹಿಣಿ ಸಿಂಧೂರಿ ಆಡಿಯೋದಲ್ಲಿ ಆರೋಪ ಮಾಡಿದ್ದಾರೆ. ಈ ಸಂಬಂಧ ಸಾ.ರಾ.ಮಹೇಶ್ ಪರವಾಗಿ 2021ರ ಜುಲೈ 1ರಂದು ಲೀಗಲ್ ನೋಟಿಸ್ ಜಾರಿ ಮಾಡಲಾಗಿತ್ತು ಎಂದು ಹೇಳಿದರು.
ಸಾಮಾಜಿಕ ಜಾಲತಾಣದ ಆಡಿಯೋದಲ್ಲಿ ಇರುವುದು ನಿಮ್ಮ ಧ್ವನಿಯೇ? ಉದ್ದೇಶ ಪೂರ್ವಕವಾಗಿ ಮಾತನಾಡಿದ್ದೀರಾ ಎಂಬೆರಡು ಪ್ರಶ್ನೆಗಳನ್ನು ನೋಟಿಸ್ನಲ್ಲಿ ಕೇಳಲಾಗಿತ್ತು. ಅದಕ್ಕವರು, ಅದು ತನ್ನ ಖಾಸಗಿ ಸಂಭಾಷಣೆಯೆಂದು ಒಪ್ಪಿಕೊಂಡಿದ್ದಾರೆ. ಅದರ ಆಧಾರದ ಮೇಲೆ ಮೊಕದ್ದಮೆ ಹಾಕಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಕರಣದ ಆಧಾರದ ಮೇಲೆ 2022 ಅಕ್ಟೋಬರ್ 20ರಂದು ರೋಹಿಣಿ ಸಿಂಧೂರಿ ನ್ಯಾಯಾಲಯಕ್ಕೆ ಉತ್ತರ ಕೊಡಬೇಕಾಗುತ್ತದೆ. ಈಗಾಗಲೇ ಖಾಸಗಿ ಸಂಭಾಷಣೆ ಅಂತ ಒಪ್ಪಿಕೊಂಡಿರುವುದರಿಂದ ಬೇರೆ ಹೇಳಿಕೆ ನೀಡಲು ಅವಕಾಶ ಇಲ್ಲ. ಆ ಸಂಭಾಷಣೆಯ ಹಿನ್ನೆಲೆ, ಉದ್ದೇಶವನ್ನೂ ಕೇಸ್ಗೆ ಸೇರಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ ಎಂದರು.