ಸಚಿವ ಸೋಮಶೇಖರ್​ರ ತಾಯಿಯ ಆಸೆ ನೆರವೇರಿಸಿದ ಎಸ್​.ಎಂ. ಕೃಷ್ಣ!

st somashekhar mother
Published on

ಬೆಂಗಳೂರು: ಸಚಿವ ಎಸ್.ಟಿ.ಸೋಮಶೇಖರ್ ಅವರ ತಾಯಿ ಸೀತಮ್ಮ ತಿಮ್ಮೇಗೌಡರ(94) ಹುಟ್ಟುಹಬ್ಬ ಕಳೆದ ವಾರವಷ್ಟೇ ನೆರವೇರಿತ್ತು. ಈ ವೇಳೆ 'ಅಮ್ಮ ನಿನಗೆ ಗಿಫ್ಟ್​ ಏನು ಕೊಡಲಿ? ನಿನಗೇನು ಇಷ್ಟ ಹೇಳಮ್ಮ?' ಎಂದಿದ್ದರು. ಮಗನ ಬಳಿ ತಾಯಿಯು ತನ್ನ ಮನದಲ್ಲಿರುವ ಆಸೆಯೊಂದನ್ನ ಪ್ರಸ್ತಾಪಿಸಿದ್ದರು. ಇದನ್ನು ನೆರವೇರಿಸುವೆಯಾ ಮಗನೇ ಎಂದೂ ಕೇಳಿದ್ದರು. ಮಂಗಳವಾರ ರಾತ್ರಿ ಆ ಕೋರಿಕೆ ಈಡೇರಿದೆ. ಅದ್ಹೇನು ಗೊತ್ತಾ?

'ಮಗನೇ, ನನಗೆ ಏನೇನು ಅವಶ್ಯಕತೆಗಳಿವೆಯೋ ಅದನ್ನೆಲ್ಲ ನೀನು ಪೂರೈಸಿದ್ದೀಯಾ. ಆದರೆ, ನಾನು ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಅಭಿಮಾನಿ. ಅವರನ್ನು ಒಮ್ಮೆ ಭೇಟಿ ಮಾಡಬೇಕು' ಎಂದು ತನ್ನ ಹುಟ್ಟುಹಬ್ಬದ ದಿನ ತಾಯಿ ಸೀತಮ್ಮ ಹೇಳಿದ್ದೇ ತಡ, ಮಗ ಸೋಮಶೇಖರ್​, ಈ ವಿಷಯವನ್ನು ತಮ್ಮ ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡಗೆ ತಿಳಿದ್ದರು. ಬಳಿಕ ಎಸ್.ಎಂ.ಕೃಷ್ಣ ಅವರಿಗೆ ಈ ವಿಚಾರವನ್ನ ತಿಳಿಸಿದ ಗೂಳಿಗೌಡ, 'ನಿಮ್ಮ ಮನೆಗೆ ಸಚಿವರ ತಾಯಿಯನ್ನು ಯಾವಾಗ ಕರೆದುಕೊಂಡು ಬರಬೇಕು? ಹೇಳಿ' ಎಂದು ಮನವಿ ಮಾಡಿದ್ದರು.

ಇದನ್ನು ಕೇಳಿದ ಎಸ್.ಎಂ.ಕೃಷ್ಣ, 'ಸಚಿವರ ಮಾತೃಶ್ರೀಯವರು ನನಗಿಂತ ಹಿರಿಯರು. ನಾನೇ ಅವರ ಮನೆಗೆ ಬಂದು ಭೇಟಿ ಮಾಡುತ್ತೇನೆ' ಎಂದಿದ್ದರು. ಕೊಟ್ಟ ಮಾತಿನಂತೆ ಮಂಗಳವಾರ ರಾತ್ರಿ ಸಚಿವ ಎಸ್.ಟಿ. ಸೋಮಶೇಖರ್ ಅವರ ಸದಾಶಿವನಗರ ನಿವಾಸಕ್ಕೆ ಮಾಜಿ ಸಿಎಂ ಎಸ್.ಎಂ. ಕೃಷ್ಣ ಭೇಟಿ ನೀಡಿ ಸೀತಮ್ಮ ಜತೆ ಕೆಲಕಾಲ ಮಾತುಕತೆ ನಡೆಸಿದರು. ಸಚಿವರ ತಾಯಿ ಸೀತಮ್ಮ ಖುಷಿಯಾದರು. ಈ ಸಂದರ್ಭದಲ್ಲಿ ಸಚಿವರ ಪತ್ನಿ ರಾಧಾ ಸೋಮಶೇಖರ್ ಹಾಗೂ ಪುತ್ರ ನಿಶಾಂತ್ ಸೋಮಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net