ಅತಿಕ್ರಮಣದಾರರ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ

Kageri-Program
Published on

ಯಲ್ಲಾಪುರ:   ಅರಣ್ಯ ಅತಿಕ್ರಮಣದಾರರಿಗೆ ಭೂಮಿ ಮಂಜೂರಿ ವಿಚಾರದಲ್ಲಿ ಕಾನೂನು ತೊಡಕು ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಜೊತೆ ಚರ್ಚಿಸಿದ್ದೇನೆ. ಅತಿಕ್ರಮಣದಾರರ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

 ಅವರು ಪಟ್ಟಣದ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಭಾನುವಾರ ಅತಿಕ್ರಮಣದಾರರೊಂದಿಗೆ ಸಮಾಲೋಚನೆ ನಡೆಸಿ, ಮಾತನಾಡಿದರು. ಹಳೆಯ ಅತಿಕ್ರಮಣದ ಭೂಮಿಯನ್ನು ಅತಿಕ್ರಮಣದಾರರಿಗೆ ಕೊಡಿಸುವ ಹೊಣೆ ನನ್ನದು. ಆದರೆ ಯಾರೂ ಹೊಸದಾಗಿ ಅತಿಕ್ರಮಣ ಮಾಡಲು ಮುಂದಾಗಬಾರದು ಎಂದ ಅವರು, ತಾವು ಸ್ಪೀಕರ್ ಆಗಿದ್ದ ಅವಧಿಯಲ್ಲಿ ಅತಿಕ್ರಮಣದಾರರೊಂದಿಗೆ ದೊಡ್ಡ ಮಟ್ಟದ ಸಭೆ ನಡೆಸಿದ್ದು, ಈಗಿನ ಸರ್ಕಾರವೂ ಅದಕ್ಕೆ ಪೂರಕವಾಗಿ ಸ್ಪಂದಿಸುತ್ತಿದೆ. ಎಲ್ಲರೂ ಒಟ್ಟಾಗಿ ಅತಿಕ್ರಮಣದಾರರಿಗೆ ನ್ಯಾಯ ಒದಗಿಸುವಲ್ಲಿ ಶ್ರಮಿಸಲಾಗುವುದು ಎಂದರು.

 ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಬಹಳಷ್ಟು ಹಾನಿ ಆಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಕಷ್ಟದಲ್ಲಿರುವವರಿಗೆ ಸಾಂತ್ವನ ಹೇಳುವ, ಧೈರ್ಯ ತುಂಬುವ ಕಾರ್ಯ ಸಮರೋಪಾದಿಯಲ್ಲಿ ಆಗಬೇಕು. ಪಕ್ಷ ಬೇಧ ಮರೆತು ಎಲ್ಲರೂ ಒಂದಾಗಿ ಸ್ಪಂದಿಸಬೇಕು ಎಂದರು. 

 ಅತಿಕ್ರಮಣದಾರರ ಪರವಾಗಿ ರಸ್ಮಾ ಕುಣಬಿ, ದೊಂಡು ಪಾಟೀಲ್ ಅಹವಾಲು ಸಲ್ಲಿಸಿದರು. ಅತಿಕ್ರಮಣದಾರರ ಸಮಸ್ಯೆಯನ್ನು ಕೇಂದ್ರ ಸಚಿವರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಬಿಜೆಪಿ ತಾಲೂಕು ಘಟಕದ ವತಿಯಿಂದ ಕಾಗೇರಿ ಅವರನ್ನು ಅಭಿನಂದಿಸಲಾಯಿತು.

 ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ಬಿಜೆಪಿ ತಾಲೂಕು ಅಧ್ಯಕ್ಷ ಪ್ರಸಾದ ಹೆಗಡೆ, ಪ್ರಧಾನ ಕಾರ್ಯದರ್ಶಿಗಳಾದ ನಟರಾಜ ಗೌಡರ್,ರವಿ ಕೈಟ್ಕರ್,

ವೆಂಕಟ್ರಮಣ ಬೆಳ್ಳಿ, ಗಣಪತಿ ಬೋಳಗುಡ್ಡೆ, ಉಮೇಶ ಭಾಗ್ವತ ಇತರರಿದ್ದರು.

* ನಮಗೆ ಸಂಸದರೇ ಶಾಸಕರು: 

ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, ನಮಗೆ ಸಂಸದ ಕಾಗೇರಿಯವರೇ ಶಾಸಕರು. ನಮ್ಮ ಸಮಸ್ಯೆಗಳನ್ನು ಅವರಲ್ಲಿ ಹೇಳಿಕೊಂಡು ಪರಿಹರಿಸಿಕೊಳ್ಳೋಣ. ಆಗಾಗ ನಮ್ಮ ಭಾಗಕ್ಕೆ ಅವರು ಭೇಟಿ ನೀಡಿ ನಮ್ಮ ಸಮಸ್ಯೆ ಆಲಿಸಲಿದ್ದಾರೆ, ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿಯಿಂದ ಅಂತರ ಕಾಯ್ದುಕೊಂಡ ಶಾಸಕ ಹೆಬ್ಬಾರ್ ಅವರಿಗೆ ಟಾಂಗ್ ನೀಡಿದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net