

ಹೊನ್ನಾವರ: ಲಿಂಗನಮಕ್ಕಿ ಹಾಗೂ ಗೇರಸೊಪ್ಪ ಜಲಾಶಯಗಳಿಂದ ಹೆಚ್ಚುವರಿ ನೀರು ಬಿಟ್ಟಲ್ಲಿ ನೆರೆಯಿಂದ ತೊಂದರೆಗೆ ಒಳಗಾಗುವ ಗ್ರಾಮಗಳ ಮನೆಗಳಿಗೆ ನೋಡಲ್ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಶನಿವಾರ ಭೇಟಿ ನೀಡಿ ಕುಟುಂಬಗಳಿಗೆ ನೋಟಿಸ್ ನೀಡಿದರು.
ತಹಸೀಲ್ದಾರ ರವಿರಾಜ ದೀಕ್ಷಿತ ಹಾಗೂ ನೋಡಲ್ ಅಧಿಕಾರಿಗಳು ನೆರೆ ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ನಗರಬಸ್ತಿಕೇರಿ , ಉಪೋಣಿ, ಹೆರಂಗಡಿ ಹಾಗೂ ಜಲವಳ್ಳಿ ಪಂಚಾಯತಿ ವ್ಯಾಪ್ತಿಯ ಕಾಳಜಿ ಕೇಂದ್ರಗಳಿಗೆ ಹಾಗೂ ಪ್ರವಾಹ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಭರ್ತಿಯಾಗುತ್ತಿರುವ ಜಲಾಶಯ: ಲಿಂಗನಮಕ್ಕಿ ಜಲಾಶಯ 1807 ಅಡಿಗೆ ತಲುಪಿದ್ದು,ಗರಿಷ್ಟ ಮಟ್ಟ 1819 ಅಡಿ ಆಗಿದೆ. ಕೆಪಿಸಿಎಲ್ ನಿಂದ ಈ ಕುರಿತು ಪ್ರಕಟಣೆ ಹೊರಡಿಸಲಾಗಿದೆ. ಶರಾವತಿ, ಗುಂಡಬಾಳ ನದಿ ತೀರದ ಜನತೆಗೆ ಧ್ವನಿವರ್ಧಕದ ಎರಡನೇ ಮುನ್ನೆಚ್ಚರಿಕೆ ನೀಡಲಾಗಿದೆ. ಘಟ್ಟದ ಮೇಲ್ಭಾಗದ ಶಿವಮೊಗ್ಗ ಜಿಲ್ಲೆಯಲ್ಲಿ ತೀವ್ರ ಮಳೆಯಾದರೆ ಜಲಾಶಯದ ನೀರು ಬಿಡುವ ಸಾಧ್ಯತೆ ಇದೆ. ಇದರಿಂದ ನದಿ ತೀರದ ಜನರಲ್ಲಿ ಆತಂಕ ಮನೆ ಮಾಡಿದೆ.