

ತುಮಕೂರು: ರಾಜ್ಯದಲ್ಲಿ ಲಕ್ಷಾಂತರ ಮಕ್ಕಳಿಗೆ ನೀಡುತ್ತಿರುವ ಬಿಸಿಯೂಟ ಯೋಜನೆಗೆ ಡಾ.ಶಿವಕುಮಾರ ಸ್ವಾಮೀಜಿ ಅವರ ಹೆಸರಿಡಬೇಕು ಎಂದು ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು.
ಪರಮಪೂಜ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತ್ಯುತ್ಸವ ಪ್ರಯುಕ್ತ ಸಿದ್ಧಗಂಗಾ ಕ್ಷೇತ್ರದಲ್ಲಿ ಆಯೋಜಿಸಿದ್ದ ‘ನಡೆದಾಡುವ ದೇವರ ಬಸವ ಭಾರತ’ ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ಮಾಡಿದ ವಿಜಯೇಂದ್ರ, ಸಿದ್ಧಗಂಗೆಯಲ್ಲಿ ತ್ರಿವಿಧ ದಾಸೋಹದ ಅನುಭವ ಮಂಟಪ ನಿರ್ಮಿಸಿದ ಪರಮಪೂಜ್ಯರು ಆಧ್ಯಾತ್ಮಿಕ ಮೇರು ಪರ್ವತವಾಗಿದ್ದಾರೆ. ನಡೆ, ನುಡಿ ಮೂಲಕ ನಾಡಿಗೆ ಮಾರ್ಗದರ್ಶಕವಾಗಿರುವ ಶ್ರೀಗಳ ಆಶಿರ್ವಾದದಿಂದಲೇ ಬಿಎಸ್ವೈ ನಾಲ್ಕು ಬಾರಿ ಸಿಎಂ ಆಗಿದ್ದು. ಇಂದು ಶರಣ ಕುಲಕ್ಕೆ ಪವಿತ್ರದಿನ, ಆಧುನಿಕ ಬಸವಣ್ಣ ಪೂಜ್ಯ ಡಾ.ಶಿವಕುಮಾರ ಸ್ವಾಮೀಜಿ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಪುಣ್ಯ, ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಮಠದ ಭಕ್ತರಾಗಿ ಆಗಮಿಸಿರುವುದು ನಮ್ಮ ಸಂಭ್ರಮ ಹೆಚ್ಚಿಸಿದೆ ಎಂದರು.
ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಪರಮಾತ್ಮನ ಸ್ಥಾನ ನೀಡಲಾಗಿದೆ. ಅನ್ನದೇವರ ಮಹಿಮೆಯನ್ನು ನಾಡಿಗೆ ಸಾರಿದ ಶ್ರೀಗಳ ತಪಸ್ಸಿನ ಫಲ ನೊಂದವರು, ಬಡವರು, ಅಕ್ಷರ ವಂಚಿತರ ಪಾಲಿಗೆ ಸಿದ್ಧಗಂಗಾ ಮಠ ಕಲ್ಪವೃಕ್ಷವಾಗಿದೆ. ನಾವು ಪ್ರತ್ಯಕ್ಷವಾಗಿ ಕಂಡ ದೇವರ ಹೆಸರನ್ನು ಶಾಲಾ ಮಕ್ಕಳಿಗೆ ಕೊಡುವ ಬಿಸಿಯೂಟ ಯೋಜನೆಗೆ ಇಡಬೇಕು ಎಂದು ಸಿಎಂಗೆ ವಿಜಯೇಂದ್ರ ಮನವಿ ಮಾಡಿದರು.