

ಬೆಂಗಳೂರು: ದಿನಸಿ ಅಂಗಡಿ ಮಾಲೀಕ ಊರಿಗೆ ಹೋಗುವ ವಿಷಯ ತಿಳಿದು ಅವರ ಮನೆ ಬೀಗ ಒಡೆದು ಚಿನ್ನಾಭರಣ ದೋಚಿದ್ದ ಆರೋಪಿಯನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಲಕ್ಷ್ಮಿದೇವಿನಗರದ ದಿಲೀಪ್ ಅಲಿಯಾಸ್ ಕುಟ್ಟಿ (21) ಬಂಧಿತ. 8.5 ಲಕ್ಷ ರೂ. ಮೌಲ್ಯದ 194 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಗ್ಗೆರೆಯ ಪ್ರೀತಿನಗರದ ಭಾರತಿ ಎಂಬಾಕೆ ದಿನಸಿ ಅಂಗಡಿ ಇಟ್ಟುಕೊಂಡಿದ್ದರು. ಇವರ ಅಂಗಡಿಗೆ ದಿಲೀಪ್, ಬಂದು ಹೋಗುತ್ತಿದ್ದ. ಸಿಗರೇಟ್ ಸೇದುವ ಚಟವಿದ್ದ ಕಾರಣಕ್ಕೆ ದಿಲೀಪ್ಗೆ ಅಂಗಡಿ ಮಾಲೀಕರು, ಊರಿಗೆ ಹೋಗುತ್ತಿದ್ದೆವೆ. ಅಗತ್ಯ ಇದ್ದರೇ ಹೆಚ್ಚಿನ ಸಿಗರೇಟ್ ಖರೀದಿಸುವಂತೆ ಹೇಳಿದ್ದರು. ಆನಂತರ ಮೇ 23ರಂದು ಬೆಳಗ್ಗೆ ಭಾರತಿ ಕುಟುಂಬ ಸಮೇತ ಕನಕಪುರದ ಕೆರೆ ಮೇಗಲದೊಡ್ಡಿಗೆ ಹೋಗಿದ್ದರು.
ಈ ಮೊದಲೆ ತಿಳಿದಿದ್ದ ದಿಲೀಪ್, ರಾತ್ರಿಯೇ ಬಂದು ಪಿಕಾಶಿಯಿಂದ ಡೋರ್ ಲಾಕ್ ಒಡೆದು ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ್ದ. ಮಾರನೇ ದಿನ ಬೆಳಗ್ಗೆ ಅಕ್ಕಪಕ್ಕದ ಮನೆಯವರು ಬಾಗಿಲು ಓಪನ್ ಆಗಿರುವುದು ನೋಡಿ ಭಾರತಿಗೆ ವಿಷಯ ಮುಟ್ಟಿಸಿದ್ದರು. ಊರಿನಿಂದ ಬಂದು ನೋಡಿದಾಗ ಆಭರಣ ಕಳವವಾಗಿತ್ತು.
ಈ ಕುರಿತು ಭಾರತಿ ನೀಡಿದ ದೂರಿನ ಮೇರೆಗೆ ಪೊಲೀಸರು, ತನಿಖೆ ಕೈಗೊಂಡು ಅಕ್ಕಪಕ್ಕದಲ್ಲಿದ್ದ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ದಿಲೀಪ್ ಮುಖಚಹರೆ ಸೆರೆಯಾಗಿತ್ತು. ಇದನ್ನು ಭಾರತಿ ನೋಡಿ, ಆರೋಪಿ ಗುರುತು ಪತ್ತೆಹಚ್ಚಿದ್ದರು. ಕೊನೆಗೆ ಆರೋಪಿಯನ್ನು ಬೆನ್ನತ್ತಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.