

ಮಳವಳ್ಳಿ: ರೈತರು, ಮಹಿಳೆಯರು ತಾವುಗಳು ತಮ್ಮ ಜಮೀನುಗಳಲ್ಲಿ ಬೆಳೆಯುವ ಧಾನ್ಯಗಳಿಂದ ಹಲವಾರು ಆರೋಗ್ಯಕರ ಖಾದ್ಯಗಳನ್ನು ತಯಾರಿಸಿ ಮಾರಾಟ ಮಾಡಿಕೊಳ್ಳುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬಹುದಾಗಿದೆ ಎಂದು ಸಾವಯವ ರೈತ ಹಾಗೂ ರಾಗಿಯಿಂದ ವಿವಿಧ ತಿನಿಸುಗಳ ತಯಾರಿಕೆಯಿಂದ ಪ್ರಖ್ಯಾತಿ ಹೊಂದಿರುವ ತಿಪಟೂರಿನ ಮೋಹನ್ ಕುಮಾರ್ ತಿಳಿಸಿದರು.
ತಾಲೂಕು ಸಂಪೂರ್ಣ ಸಾವಯವ ಕೃಷಿಕರ ಸಂಘದ ವತಿಯಿಂದ ಪಟ್ಟಣದ ಗಾಯಿತ್ರಿ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಗಿ ಮೌಲ್ಯ ವರ್ಧನೆಗಾಗಿ ವಿವಿಧ ಆಹಾರ ತಿನಿಸುಗಳ ತಯಾರು ಮಾಡುವ ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಸ್ವಾಭಿಮಾನದಿಂದ ಬದುಕಬೇಕೆಂಬ ಹಂಬಲವಿದ್ದರೆ, ನಮ್ಮ ಜಮೀನಿನಲ್ಲಿ ಬೆಳೆಯುವ ಬೆಳೆಗಳಿಂದಲೇ ಹತ್ತಾರು ರೀತಿಯ ತಿನಿಸುಗಳನ್ನು ತಯಾರಿಸಿಕೊಂಡು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಲಾಭ ಗಳಿಸಬಹುದಾಗಿದೆ. ಇದಕ್ಕೆ ನಾನೇ ಜ್ವಲಂತ ಸಾಕ್ಷಿಯಾಗಿದ್ದೇನೆ. ಬಡ ಕುಟುಂಬ ನಮ್ಮದಾಗಿದ್ದು, ಜೀವನ ಕಟ್ಟಲು ನಾವು ಬೆಳೆಯುತ್ತಿದ್ದ ರಾಗಿಯಿಂದಲೇ ಪೌಷ್ಟಿಕಯುಕ್ತ ತಿಂಡಿ ತಿನಿಸುಗಳನ್ನು ತಯಾರಿಸಿಕೊಂಡು ಮಾರಾಟ ಮಾಡಲಾರಂಭಿಸಿದೆ. ರಾಗಿಯಿಂದಲೇ ಪ್ರಸ್ತುತ 28 ವಿಧವಾದ ಖಾದ್ಯಗಳನ್ನು ತಯಾರಿಸುತ್ತಿದ್ದು, ಉತ್ತಮ ವಹಿವಾಟಿನಿಂದ ಪ್ರಸ್ತುತ ನಮ್ಮ ಆರ್ಥಿಕ ಮಟ್ಟವೂ ಸುಧಾರಣೆ ಕಂಡಿದೆ ಎಂದರು.
ಪ್ರಸ್ತುತ ಆರೋಗ್ಯಕರ ಹಾಗೂ ಪಾರಂಪರಿಕವಾದ ಗುಣಮಟ್ಟದ ಆಹಾರ ಖಾದ್ಯ ಸವಿಯುವರ ಸಂಖ್ಯೆ ಹೆಚ್ಚಾಗಿದ್ದು, ಗ್ರಾಮಿಣ ಮಹಿಳೆಯರು ಇಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿಗಳಾಗುವಂತೆ ಸಲಹೆ ನೀಡಿದರು. ಇದೇ ವೇಳೆ ರಾಗಿಯಿಂದ ವಿವಿಧ ತಿನಿಸುಗಳ ತಯಾರಿಕೆ ವಿಧಾನ ಕುರಿತು ಸ್ಥಳದಲ್ಲೇ ತಯಾರು ಮಾಡುವ ಮೂಲಕ ತರಬೇತಿ ನೀಡಿದರು. ಕಾರ್ಯಾಗಾರದಲ್ಲಿ ನೂರಕ್ಕೂ ಹೆಚ್ಚು ಸಂಘದ ಕೃಷಿಕರು ಹಾಗೂ ಮಹಿಳೆಯರು ಭಾಗವಹಿಸಿದ್ದರು. ಸಂಪೂರ್ಣ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಎಂ. ಎನ್. ಮಹೇಶ್ ಕುಮಾರ್, ಸದಸ್ಯರಾದ ಶಿವಕುಮಾರ್, ಗಜೇಂದ್ರ, ದೊಡ್ಡಣ್ಣ, ಸುರೇಶ್, ಸುವರ್ಣ ಕೇಶವಮೂರ್ತಿ ಇತರರಿದ್ದರು.