ಶಿಸ್ತಿನ ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆ ಉತ್ತಮ ಶಾಲೆ

ಶಿಸ್ತಿನ ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆ ಉತ್ತಮ ಶಾಲೆ
Published on

ನಾಪೋಕ್ಲು: ಶಿಸ್ತು ಸಂಯಮ ಉತ್ತಮ ಗುಣ ನಡತೆಗಳನ್ನು ಹೊಂದಿರುವ ವಿದ್ಯಾರ್ಥಿಗಳಿಂದ ಕೂಡಿದ ಶಾಲೆಯು ಉತ್ತಮ ಶಾಲೆ ಆಗಿರುತ್ತದೆ ಎಂದು ನಿವೃತ್ತ ಪ್ರಾಂಶುಪಾಲ ಚೌರಿರ ಡಾ.ಜಗತ್ ತಿಮ್ಮಯ್ಯ ಹೇಳಿದರು.

ಸಮೀಪದ ಅಂಕುರ್ ಪಬ್ಲಿಕ್ ಶಾಲೆಯ ವತಿಯಿಂದ ಇಲ್ಲಿಯ ಕೊಡವ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ಹತ್ತನೇ ತರಗತಿ ವಿದ್ಯಾರ್ಥಿಗಳ ಪದವಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಇಂದು ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಉತ್ತಮ ಶಾಲೆಗಳಿವೆ. ಮಕ್ಕಳನ್ನು ತಿದ್ದಿ ಸೂಕ್ತ ಮಾರ್ಗದರ್ಶನ ನೀಡುವ ಶಿಕ್ಷಕರುಗಳಿಗಿಂತ ಆ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಪೂರ್ಣ ವಿದ್ಯಾರ್ಥಿಗಳಿಂದ ಶಾಲೆಯೂ ಉತ್ತಮವಾಗಿರುತ್ತದೆ. ಪಾಲಕರು ಅಂತಹ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ದಾಖಲಿಸಬೇಕು ಎಂದರು.

ಪರಿಸರ ಸಂರಕ್ಷಣೆ ವಿದ್ಯಾರ್ಥಿಗಳು ಮುಖ್ಯವಾಗಿ ರೂಢಿಸಿಕೊಳ್ಳಬೇಕಾದ ಅಂಶವಾಗಿದೆ. ಇಂದು ಕಾವೇರಿ ನದಿ ತಟ ಬಹಳ ಕಲುಷಿತವಾಗಿದೆ. ಎಲ್ಲೆಂದರಲ್ಲಿ ತ್ಯಾಜ್ಯದ ರಾಶಿ ಕಂಡುಬರುತ್ತದೆ. ನಾವು ವಾಸಿಸುವ ಪ್ರದೇಶ ಉತ್ತಮವಾಗಿರಬೇಕು. ಗಾಳಿ ನೀರು, ಮಣ್ಣು, ಗಾಳಿ ಮಲೀನವಾಗದಂತೆ ನೋಡಿಕೊಳ್ಳಬೇಕಾದ್ದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಅದನ್ನು ವಿದ್ಯಾರ್ಥಿಗಳು ಅರಿತು ಪರಿಸರ ಸ್ವಚ್ಛತೆಗೆ ಗಮನ ಹರಿಸಬೇಕು ಎಂದರು.

ಅಂಕುರ್ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಕೇಟೋಳಿರ ರತ್ನ ಚರ್ಮಣ್ಣ ಮಾತನಾಡಿ, ವಿದ್ಯಾರ್ಥಿಗಳು ತಪ್ಪು ಮಾಡುವುದು ಸಹಜ ವ್ಯಕ್ತಿಗಳು ತಪ್ಪು ಮಾಡುತ್ತಾರೆ. ಆ ತಪ್ಪುಗಳನ್ನು ತಿದ್ದಿಕೊಂಡು ಜೀವನದಲ್ಲಿ ಮುಂದುವರಿಯಬೇಕು ವಿದ್ಯಾರ್ಥಿಗಳು 10ನೇ ತರಗತಿಯವರೆಗೆ ಮಕ್ಕಳಾಗಿರಬೇಕು ಮಕ್ಕಳ ಜೀವನ ಅಮೂಲ್ಯವಾದದು ಉತ್ತಮ ವ್ಯಕ್ತಿತ್ವವನ್ನು ಮಕ್ಕಳು ರೂಪಿಸಿಕೊಳ್ಳಲು ಶಾಲೆ ಸಹಕಾರಿಯಾಗಿದೆ ವಿದ್ಯಾರ್ಥಿಗಳು ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಶಾಲೆ ಕಲಿಸಿಕೊಟ್ಟಿದೆ. ತಮ್ಮ ಜೀವನ ರೂಪಿಸಿಕೊಳ್ಳಲು ಮಾರ್ಗದರ್ಶಿಯಾಗಿರುವ ಶಾಲೆಯ ಬಗ್ಗೆ ವಿದ್ಯಾರ್ಥಿಗಳು ಪಾಲಕರು ಉತ್ತಮ ಪ್ರೀತಿ ಬಾಂಧವ್ಯ ಹೊಂದಿರಬೇಕು ಎಂದು ಮಕ್ಕಳಿಗೆ ಉಪಯುಕ್ತ ಮಾಹಿತಿ, ಮಾರ್ಗದರ್ಶನ ನೀಡಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪಾಲಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಅಂಕುರ್ ಶಾಲೆಯ ಅಧ್ಯಕ್ಷ ಕೇಟೋಳಿರ ಚರ್ಮಣ್ಣ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ನಿರ್ಗಮಿತ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ, ಅರ್ಹತಾ ಪತ್ರವನ್ನು ನೀಡಿ ಗೌರವಿಸಲಾಯಿತು. ಟ್ರಸ್ಟಿ ಪಿ.ಕೆ. ಗಾಯನ್ ಗೌರಮ್ಮ, ಪಾಲಕರು, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net