

ಬೆಂಗಳೂರು: ಕಂಡ ಕಂಡ ಮಹಿಳೆಯರಿಗೆ ಅಶ್ಲೀಲ ಫೋಟೋ, ವಿಡಿಯೋ ಕಳುಹಿಸಿ ಹಿಂಸಿಸುತ್ತಿದ್ದ ಇಲ್ಲೊಬ್ಬ ವಿಕೃತ ಕಾಮಿಯನ್ನ ಆಗ್ನೇಯ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಡಿವಾಳದ ಜೈಭೀಮ್ ನಗರದ ಪುರುಷೋತ್ತಮ್(40) ಬಂಧಿತ. ಪತ್ನಿ ಮತ್ತು ಮಕ್ಕಳ ಜತೆಗೆ ನೆಲೆಸಿದ್ದ ಪುರುಷೋತ್ತಮ್, ಜೋಮ್ಯಾಟೊ ಡೆಲವರಿ ಕೆಲಸ ಮಾಡುತ್ತಿದ್ದ. ಫೇಸ್ಬುಕ್ ಖಾತೆ ತೆರೆದು ದೇಶ, ವಿದೇಶದ ಸುಂದರ ಮಹಿಳೆಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದ. ರಿಕ್ವೆಸ್ಟ್ ಅನ್ನು ಓಕೆ ಮಾಡುತ್ತಿದ್ದಂತೆ ಮೇಸೆಂಜರ್ನಲ್ಲಿ ಯುವತಿ-ಮಹಿಳೆಯರಿಗೆ ಲೈಂಗಿಕ ಉತ್ತೇಜನ ನೀಡುವ ಅಪ್ರಾಪ್ತರ ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸಿ ವಿಕೃತಿ ಮೆರೆಯುತ್ತಿದ್ದ.
ಈ ಬಗ್ಗೆ ಕೇಂದ್ರ ಸರ್ಕಾರದ ಮಾಹಿತಿ ಆಧರಿಸಿ ಸಿಐಡಿ ಅಧಿಕಾರಿಗಳು ಸಿಇಎನ್ ಠಾಣೆಗೆ ದೂರು ನೀಡಿದ್ದರು. ಇದರ ಆಧಾರದ ಮೇಲೆ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಲಾಗಿದೆ. ಇದೇ ರೀತಿ ಹಲವರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ. ನೊಂದ ಸಂತ್ರಸ್ತೆಯರು ಸ್ನೇಹ ಕಡಿತ ಮಾಡಿಕೊಳ್ಳುತ್ತಿದ್ದರು. ವಿಕೃತ ಮನಸ್ಸಿನಿಂದ ಆರೋಪಿ ಈ ಕೃತ್ಯ ಎಸಗುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.